ADVERTISEMENT

ಮೈಸೂರು‌ ನಗರದಲ್ಲಿ ಅಡುಗೆ ಅನಿಲ ಪೈಪ್‌ಲೈನ್‌–ಬಿಜೆಪಿಯಲ್ಲಿ ಕಚ್ಚಾಟ!

ಸಂಸದ ಪ್ರತಾಪಸಿಂಹ ಹಟ: ರಾಮದಾಸ್‌, ನಾಗೇಂದ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:45 IST
Last Updated 29 ಜನವರಿ 2022, 19:45 IST
ಮೈಸೂರಿನ ರಿಂಗ್‌ ರಸ್ತೆ ಬಳಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ
ಮೈಸೂರಿನ ರಿಂಗ್‌ ರಸ್ತೆ ಬಳಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ   

ಮೈಸೂರು‌: ನಗರದಲ್ಲಿ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಪೈಪ್‌ಲೈನ್‌ ಅಳವಡಿಕೆ ವಿಚಾರವಾಗಿ ಆಡಳಿತಾರೂಢ ಬಿಜೆಪಿಯಲ್ಲಿ ಕಚ್ಚಾಟ ತಾರಕಕ್ಕೇರಿದೆ.

ಕಾಮಗಾರಿ ಮೈಸೂರು ರಿಂಗ್‌ ರಸ್ತೆ ಬಳಿ ಈಗಾಗಲೇ ಆರಂಭವಾಗಿದೆ. ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸಂಸದ ಪ್ರತಾಪಸಿಂಹ ಹಟ ತೊಟ್ಟಿದ್ದರೆ, ಇದೇ ಪಕ್ಷದ ಶಾಸಕರಾದ ಎಸ್‌.ಎ.ರಾಮದಾಸ್‌ ಹಾಗೂ ಎಲ್‌.ನಾಗೇಂದ್ರ ವಿರೋಧಿಸುತ್ತಿದ್ದಾರೆ. ನಗರದೊಳಗೆ ಯೋಜನೆ ಅನುಷ್ಠಾನಕ್ಕೆ ಅನುಮತಿ ಪಡೆಯಲು ಕರೆದಿದ್ದ ಪಾಲಿಕೆ ಸಭೆಯಿಂದ ಆಡಳಿತ ಪ‍ಕ್ಷವಾದ ಬಿಜೆಪಿ ಕಾರ್ಪೊರೇಟರ್‌ಗಳೇ ದೂರ ಉಳಿದಿದ್ದರು.

ಇದು ಪ್ರತಾಪಸಿಂಹ ಅವರನ್ನು ಕೆರಳಿಸಿದ್ದು, ಬಹಿರಂಗವಾಗಿಯೇ ತಮ್ಮ ಪಕ್ಷದ ಶಾಸಕರು, ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಶಾಸಕರು ತಿರುಗೇಟು ನೀಡಿದ್ದಾರೆ.

ADVERTISEMENT

ಯೋಜನೆ ಅನುಷ್ಠಾನದಿಂದ ಹಾಳಾದ ರಸ್ತೆ ದುರಸ್ತಿಗೆ ಬಿಡುಗಡೆ ಯಾಗುವ ಹಣ ಹಾಗೂ ಕಮಿಷನ್‌ ವಿಚಾರವೇ ಪರಸ್ಪರ ತಿಕ್ಕಾಟಕ್ಕೆ ಕಾರಣ ವಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಕಮಿಷನ್‌ ವಿಚಾರವನ್ನು ಮೂವರು ಜನಪ್ರತಿನಿಧಿಗಳೂ ಅಲ್ಲಗಳೆದಿದ್ದಾರೆ. ‌ಬದಲಾಗಿ ರಸ್ತೆ ಹಾಳಾಗಿ, ದೂಳು ಏಳಲಿದ್ದು, ದುರಸ್ತಿಗೆ ನೀಡುವ ಹಣ ಸಾಕಾಗುವುದಿಲ್ಲ ಎಂಬುದು ಶಾಸಕರ ವಾದ.

‘ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆಯುವುದಕ್ಕೆ ವಿರೋಧವಿದೆ ಎಂದಾದರೆ, ಮೊಬೈಲ್‌ ಕಂಪನಿಗಳ ಕೇಬಲ್‌ ಅಳವಡಿಸಲು ಎಲ್ಲ ರಸ್ತೆಗಳನ್ನೂ ಅಗೆಯಲಾಗಿತ್ತು. ಆಗ ವಿರೋಧ ವ್ಯಕ್ತಪಡಿಸಿಲ್ಲ ಏಕೆ? ಖಾಸಗಿ ಕಂಪನಿಗಳು ಪಾಲಿಕೆ ಸದಸ್ಯರನ್ನು ವೈಯಕ್ತಿವಾಗಿ ಮಾತನಾಡಿಸಿಕೊಂಡು ಹೋಗಿದ್ದರೇ’ ಎಂದು ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.

‘ರಸ್ತೆ ಅಗೆದ 24 ಗಂಟೆಗಳಲ್ಲಿ ಸರಿಪಡಿಸಲಾಗುತ್ತದೆ. ಪ್ರತಿ ಮೀಟರ್‌ಗೆ ₹ 2,000 ನೀಡುವುದಲ್ಲದೆ, ಕಂಪನಿಯೇ ದುರಸ್ತಿ ಮಾಡುತ್ತದೆ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ನಾಗೇಂದ್ರ, ‘ಏಜೆನ್ಸಿಯವರು ಪಾಲಿಕೆ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಪಡೆಯಬೇಕು. ಪ್ರತಾಪಸಿಂಹ ಅವರಿಗೆ ಏಕೆ ಆಸಕ್ತಿ? ಗುತ್ತಿಗೆದಾರರ ಪರವಾಗಿ ಏಕೆ ಹೋರಾಟ ಮಾಡುತ್ತಿದ್ದಾರೆ? ಏಜೆನ್ಸಿಯವರು ಕೊಡುವ ಹಣ ದುರಸ್ತಿಗೆ ಸಾಕಾಗುವುದಿಲ್ಲ. ಜನರಿಗೆ ತೊಂದರೆ ಉಂಟು ಮಾಡುವ ಕಾಮಗಾರಿಗೆ ನಾನು ಬಿಡುವುದಿಲ್ಲ’ ಎಂದಿದ್ದಾರೆ.

ಅನುಕೂಲವೇನು?: ‘ಈಗ ಒಂದು ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹ 904 ಇದೆ. ಪೈಪ್‌ಲೈನ್‌ ಮೂಲಕ ಮನೆಗೆ ಪೂರೈಕೆಯಾದರೆ ಇಷ್ಟೇ ಪ್ರಮಾಣದ ಅಡುಗೆ ಅನಿಲ ₹ 500 ರಿಂದ ₹ 550ಕ್ಕೆ ಲಭ್ಯವಾಗಲಿದೆ. ಅಂದರೆ ₹ 400ಉಳಿತಾಯವಾಗಲಿದೆ’ ಎಂಬುದು ಸಂಸದ ಪ್ರತಾಪ ಸಿಂಹ ಅವರ ಸಮರ್ಥನೆ.

ಶಾಸಕರ ವಿರೋಧವೇಕೆ?

ಯಾರೊಂದಿಗೂ ಚರ್ಚಿಸದೆ, ಏಕಾಏಕಿ ಯೋಜನೆ ಜಾರಿಗೆ ಪ್ರತಾಪಸಿಂಹ ಆಸಕ್ತಿ ವಹಿಸಿರುವುದು ಶಾಸಕರ ಕೋಪಕ್ಕೆ ಕಾರಣ. ಅಲ್ಲದೇ, ಪಾಲಿಕೆಯಿಂದ ಅನುಮತಿ ಪಡೆಯಲು ಗುತ್ತಿಗೆದಾರರ ಪರ ವಕಾಲತ್ತು ವಹಿಸಿದ್ದಾರೆ ಎಂಬುದು ಆರೋಪ. ರಸ್ತೆ ಅಭಿವೃದ್ಧಿಗೆ ಈಗಾಗಲೇ ಕೋಟ್ಯಂತರ ರೂಪಾಯಿ ವ್ಯಯಿಸಿದ್ದು, ಪೈಪ್‌ಲೈನ್‌ ಅಳವಡಿಸಲು ಮತ್ತೆ ನೆಲ ಅಗೆಯಬೇಕಾಗಿರುವುದರಿಂದ ರಸ್ತೆ ಹಾಳಾಗಲಿದೆ ಎಂಬ ವಾದವನ್ನೂ ಮುಂದಿಡುತ್ತಾರೆ.

‘ತಾವೇ ಜಾರಿಗೆ ತಂದ ಯೋಜನೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ’ ಎಂದು ಶಾಸಕರು ದೂರಿದ್ದಾರೆ.

ಏನಿದು ಯೋಜನೆ?

ಪೈಪ್‌ಲೈನ್‌ ಮೂಲಕ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವ ಯೋಜನೆ ಇದಾಗಿದ್ದು, ಎಜಿ ಅಂಡ್‌ ಪಿ ಪ್ರಥಮ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ಮೈಸೂರು ನಗರದ 40 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಇದೆ. ಹೆಬ್ಬಾಳದಲ್ಲಿ ಪಿಎನ್‌ಜಿ ಸಂಗ್ರಹ ಘಟಕ ಸ್ಥಾಪಿಸಲಾಗುತ್ತಿದೆ.

***

ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂಬುದು ಪ್ರಧಾನಿ ಮೋದಿ ಘೋಷಣೆ. ಹೀಗಾಗಿ, ಇಲ್ಲಿ ಯಾವುದೇ ಕಮಿಷನ್‌ ವ್ಯವಹಾರ ಇಲ್ಲ

-ಪ್ರತಾಪಸಿಂಹ, ಬಿಜೆಪಿ ಸಂಸದ

***

ಕಮಿಷನ್‌ ಯಾವನಿಗೆ ಬೇಕು? ಗುತ್ತಿಗೆದಾರ ಯಾರೆಂದೇ ಗೊತ್ತಿಲ್ಲ. ಯೋಜನೆ ಮಾಹಿತಿಯನ್ನೇ ನೀಡಿಲ್ಲ. ರಸ್ತೆ ಹಾಳು ಮಾಡಿ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ

- ಎಲ್‌.ನಾಗೇಂದ್ರ, ಬಿಜೆಪಿ ಶಾಸಕ

***
ಪೈಪ್‌ಲೈನ್ ಅಳವಡಿಕೆಯಿಂದ ರಸ್ತೆಗಳು ಹಾಳಾಗುತ್ತವೆ. ಹೀಗಾಗಿ, ಅನುಮತಿ ಕೊಡಬಾರದು. ಪಾಲಿಕೆ ಆಯುಕ್ತರಿಗೆ ಪತ್ರ ಕೂಡ ಬರೆದಿದ್ದೇನೆ

- ಎಸ್‌.ಎ.ರಾಮದಾಸ್‌, ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.