ADVERTISEMENT

ನಾಗಮಂಗಲ ಗಲಭೆ ಪೂರ್ವಯೋಜಿತ: ಬಿಜೆಪಿ ಸತ್ಯಶೋಧನಾ ಸಮಿತಿ ವರದಿ

ಬಿಜೆಪಿ ಸತ್ಯಶೋಧನಾ ಸಮಿತಿ ವರದಿ* ನಿರ್ದಿಷ್ಟ ಬಂಕ್‌ನಿಂದ ಬಾಂಬ್‌ಗೆ ಪೆಟ್ರೋಲ್‌‘

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:25 IST
Last Updated 20 ಸೆಪ್ಟೆಂಬರ್ 2024, 15:25 IST
ಬಿಜೆಪಿ ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದ ಸತ್ಯಶೋಧನಾ ಸಮಿತಿಯು ನಾಗಮಂಗಲದ ಗಲಭೆ ಕುರಿತ ವರದಿಯನ್ನು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿತು. ಈ ಸಂದರ್ಭದಲ್ಲಿ ಭಾಸ್ಕರ್‌ ರಾವ್‌, ಕೆ.ಸಿ.ನಾರಾಯಣಗೌಡ, ಲಕ್ಷ್ಮಿ ಅಶ್ವಿನ್‌ಗೌಡ ಜತೆಗಿದ್ದರು.
ಬಿಜೆಪಿ ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದ ಸತ್ಯಶೋಧನಾ ಸಮಿತಿಯು ನಾಗಮಂಗಲದ ಗಲಭೆ ಕುರಿತ ವರದಿಯನ್ನು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿತು. ಈ ಸಂದರ್ಭದಲ್ಲಿ ಭಾಸ್ಕರ್‌ ರಾವ್‌, ಕೆ.ಸಿ.ನಾರಾಯಣಗೌಡ, ಲಕ್ಷ್ಮಿ ಅಶ್ವಿನ್‌ಗೌಡ ಜತೆಗಿದ್ದರು.   

ಬೆಂಗಳೂರು: ‘ನಾಗಮಂಗಲದಲ್ಲಿ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ನಡೆದ ದಾಳಿ ಪೂರ್ವಯೋಜಿತ. ಇದನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಬಿಜೆಪಿ ಸತ್ಯ ಶೋಧನಾ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯ ಸಮಿತಿ ಇತ್ತೀಚೆಗೆ ನಾಗಮಂಗಲದ ಗಲಭೆಪೀಡಿತ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದು, ಅದನ್ನು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿತು.

‘ನಾಗಮಂಗಲದಲ್ಲಿ ಉತ್ತಮ ಸೌಹಾರ್ದತೆ ಇತ್ತು. ಕಾಲ– ಕಾಲಕ್ಕೆ ರಾಜಕೀಯ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ. ಇದರ ಹಿಂದೆ ದೇಶದ್ರೋಹಿಗಳು ಮತ್ತು ನಿಷೇಧಿತ ಪಿಎಫ್‌ಐ ಸಂಘಟನೆಯ ವ್ಯಕ್ತಿಗಳ ಕೈವಾಡವಿದೆ’ ಎಂದು ಸಮಿತಿಯ ಅಧ್ಯಕ್ಷ ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಗಣಪತಿ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ 25ರಿಂದ 30 ಜನರು ಮಾತ್ರ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಆಗ ಗಲಭೆ ಆಗಿದೆ. ಕಳೆದ ವರ್ಷವೂ ಗಲಭೆ ಆಗಿತ್ತು. ಈ ವಿಷಯ ಗೊತ್ತಿದ್ದರೂ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆರೋಪಿಗಳು ಮಾಸ್ಕ್‌ ಧರಿಸಿದ್ದರು. ಪೆಟ್ರೋಲ್‌ ಬಾಂಬ್‌ ಸಿದ್ಧಪಡಿಸಿಟ್ಟುಕೊಂಡಿದ್ದರು. ನಿರ್ದಿಷ್ಟ ಬಂಕ್‌ವೊಂದರಿಂದ ಪೆಟ್ರೋಲ್ ಬಾಂಬ್‌ಗಾಗಿ ಪೆಟ್ರೋಲ್‌ ತುಂಬಿ ಕೊಡಲಾಗಿದೆ. ಅಲ್ಲದೇ, ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರು ಬಾರಿ ಬಂದು ಬೆಂಕಿ ಹಚ್ಚಿದ್ದಾರೆ. ಈ ಸಂಗತಿಗಳು ಪೂರ್ವ ನಿಯೋಜಿತ ಕೃತ್ಯಕ್ಕೆ ಸಾಕ್ಷಿ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕೇರಳ ಮೂಲದ ವ್ಯಕ್ತಿಗಳು ಗಲಭೆಯಲ್ಲಿ ಭಾಗಿಯಾಗಿರುವ ವಿಚಾರವನ್ನು ಗೃಹ ಸಚಿವರೂ ಹೇಳಿದ್ದಾರೆ. ಬಾಂಗ್ಲಾದೇಶಿಯರೂ ಇರುವ ಬಗ್ಗೆ ತಿಳಿಸಿದ್ದಾರೆ. 800 ಎಕರೆ ಹೊಂದಿರುವ ಪ್ರಬಲ ವ್ಯಕ್ತಿಯ ಜಾಗದಲ್ಲಿ ಬಾಂಗ್ಲಾದೇಶಿಯರು ಕೆಲಸ ಮಾಡುತ್ತಿದ್ದಾರೆ. ನಿಷೇಧಿತ ಪಿಎಫ್‌ಐ ಚಟುವಟಿಕೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ, ಸರ್ಕಾರ ಸುಮ್ಮನಿದ್ದು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಟೀಕಿಸಿದರು.

‘ದೇಶ ದ್ರೋಹಿಗಳ ಬಗ್ಗೆ ಮೃದು ಧೋರಣೆ’

‘ಕಾಂಗ್ರೆಸ್‌ ಸರ್ಕಾರ ದೇಶದ್ರೋಹಿಗಳ ವಿರುದ್ಧ ಮೃದುಧೋರಣೆ ತಳೆದಿರುವ ಕಾರಣ ಶಾಂತಿ– ಸುವ್ಯವಸ್ಥೆ ಕದಡುವ ಕೆಲಸ ನಡೆದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ‘ನಾಗಮಂಗಲ ದಾವಣಗೆರೆ ಮತ್ತಿತರ ಕಡೆಗಳಲ್ಲಿ ನಡೆದ ಗಲಭೆಗಳ ಕುರಿತು ನಿಮ್ಮ ನೇತೃತ್ವದ ಸರ್ಕಾರದಿಂದ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್‌ಐಎಯಿಂದಲೇ ತನಿಖೆ ಆಗಬೇಕು’ ಎಂದು ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು. ‘ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆ ಕಾಂಗ್ರೆಸ್‌ ನಾಯಕರಿಗಿದೆ. ಹೀಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಿತಿ ಮೀರಿದೆ’ ಎಂದರು. ‘ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಣ ಮುಂದೆ ಇವೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ದಾಳಿ ಮತ್ತು ದುಂಡಾವರ್ತಿಗೆ ಕಾರಣ’ ಎಂದು ವಿಜಯೇಂದ್ರ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.