ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹಬ್ಬುತ್ತಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರದ ನಾಯಕರುಪರಸ್ಪರ ಕಿತ್ತಾಟದಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿ ಸರ್ಕಾರ ಕೊರೊನಾವೈರಸ್ ನಿರ್ವಹಣೆಯ ಬದ್ಧತೆ ಮರೆತು ಸಮನ್ವಯತೆ ಇಲ್ಲದೆ ಸ್ವಾರ್ಥ, ಪ್ರತಿಷ್ಠೆಯ ಕಿತ್ತಾಟದಲ್ಲಿ ಮುಳುಗಿದೆ ಎಂದು ಟೀಕಿಸಿದೆ.
ಬಿಜೆಪಿ ನಾಯಕರಾದ ಅಶ್ವತ್ಥ ನಾರಾಯಣ vs ಅಶೋಕ್, ಸಿ.ಟಿ. ರವಿ vs ಸುಧಾಕರ್, ಸಚಿವ ನಾರಾಯಣಸ್ವಾಮಿ vs ಪ್ರತಾಪ್ ಸಿಂಹ ನಡುವೆ ಒಳಜಗಳ ನಡೆಯುತ್ತಿದ್ದು, ಕೇಂದ್ರದಿಂದ ಆಕ್ಸಿಜನ್ ತರಲಾಗದ ಹೇಡಿಗಳು ಇಲ್ಲೇ ಕಿತ್ತಾಡುತ್ತಾ ಜನರನ್ನು ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದೆ.
ಈ ಮೊದಲು ಚಾಮರಾಜನಗರದ ದುರಂತವನ್ನೇ ಮುಂದಿಟ್ಟುಕೊಂಡು ನೆರೆ ಜಿಲ್ಲೆಯ ಉಸ್ತುವಾರಿ ಸಚಿವರು ಮೈಸೂರಿಗೆ ಬಂದು ಆಮ್ಲಜನಕದ ಸಿಲಿಂಡರ್ ಒಯ್ಯುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಂಸದ ಪ್ರತಾಪ ಸಿಂಹ ಕಿಡಿ ಕಾರಿದ್ದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಯೇ ಸ್ವತಃ ಪೊಲೀಸ್ ಬೆಂಗಾವಲಿನೊಂದಿಗೆ ಮೈಸೂರಿಗೆ ಬಂದು ಆಮ್ಲಜನಕದ ರೀ ಫಿಲ್ಲಿಂಗ್ ಘಟಕದಿಂದ ಸಿಲಿಂಡರ್ ಕೊಂಡೊಯ್ಯುವುದು ಸರಿಯೇ? ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.