ADVERTISEMENT

ಬಿಜೆಪಿ-ಜೆಡಿಎಸ್‌ ಮೈತ್ರಿ | ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಾಗಿದೆ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 11:01 IST
Last Updated 30 ಸೆಪ್ಟೆಂಬರ್ 2023, 11:01 IST
<div class="paragraphs"><p>ಸಿ.ಎಂ.ಇಬ್ರಾಹಿಂ</p></div>

ಸಿ.ಎಂ.ಇಬ್ರಾಹಿಂ

   

ಬೆಂಗಳೂರು: ‘ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದಾಗಿ ಪಕ್ಷದ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಾಗಿದೆ. ಅ.16ರ ನಂತರ ಸೂಕ್ತನಿರ್ಧಾರ ತೆಗೆದುಕೊಳ್ಳುವೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವುದಾಗಿ ಪಕ್ಷದ ವರಿಷ್ಠರು ಹೇಳಿದ್ದಾರೆ. ದೆಹಲಿಗೆ ಹೋಗುವ ಮೊದಲು ರಾಜ್ಯ ಘಟಕದ ಅಧ್ಯಕ್ಷನಾದ ನನಗೆ ಮಾಹಿತಿ ನೀಡಲಿಲ್ಲ. ಪಕ್ಷದ ವೇದಿಕೆಯಲ್ಲೂ ಚರ್ಚೆ ನಡೆದಿಲ್ಲ. ಯಾವಾಗ ಮೈತ್ರಿಯಾಯಿತು ಎನ್ನುವುದೂ ಗಮನಕ್ಕೆ ಬಂದಿಲ್ಲ. ಇದರಿಂದ ಮನಸ್ಸಿಗೆ ನೋವಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಪಕ್ಷದಲ್ಲಿ ಚರ್ಚೆಯಾಗಿದ್ದರೆ ನಿರ್ಣಯ ಕೈಗೊಳ್ಳಬೇಕಿತ್ತು. ನಿರ್ಣಯಕ್ಕೆ ರಾಜ್ಯ ಘಟಕದ ಅಧ್ಯಕ್ಷನಾದ ನನ್ನ ಸಹಿ ಇರಬೇಕಿತ್ತು. ಪಕ್ಷದ ಉನ್ನತ ನಾಯಕರ ಪ್ರವಾಸ ಆರಂಭಕ್ಕೂ ಮೊದಲೇ ಬಿಜೆಪಿ ನಾಯಕರನ್ನು ಭೇಟಿಯಾಗಿ ಮೈತ್ರಿ ಮಾಡಿಕೊಂಡು ಬಂದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜನತಾ ದಳದ ಮೂಲ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಹೋಗಿವೆ. ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಪಕ್ಷದ ವರಿಷ್ಠರು ಇಲ್ಲ. ಬಿಜೆಪಿ ಬಳಿ ಹೋಗಿದ್ದೇ ಮೊದಲ ತಪ್ಪು. ಬಿಜೆಪಿ ನಾಯಕರೇ ದೇವೇಗೌಡರ ಮನೆಗೆ ಬರಬೇಕಿತ್ತು. ನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ. ಜನತಾ ದಳ ಹಿಂದೂ ಅಥವಾ ಮುಸ್ಲಿಂ ಪಕ್ಷವಲ್ಲ. ಅದು ಕನ್ನಡಿಗರ ಪಕ್ಷ’ ಎಂದರು.

ಅ.16ರ ನಂತರ ನಿರ್ಧಾರ: ‘ಪಕ್ಷದಲ್ಲಿ ಇರಬೇಕೋ? ತ್ಯಜಿಸಬೇಕೋ ಎನ್ನುವ ಕುರಿತು ಅ.16ರ ನಂತರ ಕುಮಾರಸ್ವಾಮಿ, ದೇವೇಗೌಡರ ಜತೆ ಮಾತನಾಡಿಯೇ ನಿರ್ಧಾರ ಮಾಡುತ್ತೇನೆ. ದೆಹಲಿಯಿಂದ ಕಾಂಗ್ರೆಸ್‌ ನಾಯಕರು ಮಾತನಾಡಿದ್ದಾರೆ. ಎನ್‌ಸಿಪಿಯ ಶರದ್‌ ಪವಾರ್, ಆಮ್‌ಆದ್ಮಿ ಪಕ್ಷದ ಮುಖಂಡರು ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆದಿಲ್ಲ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.