ಬೆಂಗಳೂರು: ‘ಅವಿಶ್ವಾಸ ನಿರ್ಣಯ ಕುರಿತ ಪ್ರಸ್ತಾಪವನ್ನು ನಾವು ಮುಂದು ಮಾಡುತ್ತಿದ್ದಂತೆ ಅನಿವಾರ್ಯವಾಗಿ ನಾವೇ ವಿಶ್ವಾಸ ಮತ ಯಾಚಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕೆ ಸ್ಪೀಕರ್ ಗುರುವಾರಕ್ಕೆ ದಿನಾಂಕ ನಿಗದಿ ಮಾಡಿದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಮವಾರ ಸದನ ಕಲಾಪದಲ್ಲಿ ಭಾಗವಹಿಸಿದ್ದ ಅವರು, ಸ್ಪೀಕರ್ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ ಬಳಿಕ ಹೊರ ಬಂದು ಸುದ್ದಿಗಾರರ ಜತೆ ಮಾತನಾಡಿದರು.
ಇಂದು ಸ್ಪೀಕರ್ ಕೊಠಡಿಯಲ್ಲಿ ಸೌಹಾರ್ದಯುತ ಮಾತುಕತೆ ನಡೆಯಿತು. ಈ ವೇಳೆ ‘ವಿಶ್ವಾಸ ಮತವನ್ನು ಮೊದಲನೇ ದಿನವೇ ಕೇಳುತ್ತಿದ್ದೆ, ವಿಶ್ವಾಸವಿಲ್ಲದೆ ಸದನ ಮುನ್ನಡೆಸಬಾರದು ಎಂದೇ ಅಂದು ಸದನ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು’ ಎಂದು ಸ್ಪೀಕರ್ ತಿಳಿಸಿದ್ದಾಗಿ ಯಡಿಯೂರಪ್ಪ ವಿವರಿಸಿದರು.
ಅನಿವಾರ್ಯವಾಗಿ ವಿಶ್ವಾಸ ಮತ ಯಾಚಿಸುತ್ತೇವೆ ಎಂದು ಸಿಎಂ ಹೇಳಿದರು. ವಿಶ್ವಾಸ ಮತ ಯಾಚನೆ ಮಗಿಯುವವರೆಗೆ ಯಾವುದೇ ಕಲಾಪವನ್ನು ನಡೆಸುವುದು ಬೇಡ ಎಂದು ಸ್ಪೀಕರ್ ಅವರಿಗೆ ಕೇಳಿಕೊಂಡಿದ್ದೇವೆ. ಆದ್ದರಿಂದ ಸ್ಪೀಕರ್ ಗುರುವಾರಕ್ಕೆ ವಿಶ್ವಾಸ ಮತಯಾಚನೆ ಸಮಯ ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.
ಅತೃಪ್ತರನ್ನು ಮನವೊಲಿಸಲು ಮೈತ್ರಿಗೆ ಇನ್ನೂ ಎರಡು ದಿನ ಕಾಲಾವಕಾಶ ಸಿಕ್ಕಂತಾಗಲಿಲ್ಲವೇ ಎಂದು ಸುದ್ದಿಗಾರರುಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅದಕ್ಕು ಇದಕ್ಕು ಸಂಬಂಧವಿಲ್ಲ. ಕಾಲವಕಾಶ ಅವರಿಗೂ ಇದೆ. ನಮಗೂ ಇದೆ ಎಂದರು.
ವಿಧಾನಸೌಧದಿಂದ ಎಲ್ಲಿಗೆ ತೆರಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಎಲ್ಲಾ ಶಾಸಕರು ನೇರವಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ’ ಎಂದು ಬಿಎಸ್‌ವೈ ತಿಳಿಸಿದರು.
ಎರಡು ದಿನದಿಂದ ರೆಸಾರ್ಟ್‌ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಇಂದು ಬೆಳಿಗ್ಗೆ ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಬಸ್‌ನಲ್ಲಿ ಬಂದಿದ್ದರು.
ತಾಜ್ ವಿವಾಂತ ಹೋಟೆಲ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಬಂದಿದ್ದರು. ಕಲಾಪ ಮುಂದೂಡಿದ ಬಳಿಕ ಅವರು ಮತ್ತೆ ಹೋಟೆಲ್‌ಗೆ ತೆರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.