ADVERTISEMENT

ಬಿಜೆಪಿ ಸರ್ಕಾರದ ‘ಜನಸ್ಪಂದನ’ ಇಂದು; ಸರ್ಕಾರದ ‘ರಿಪೋರ್ಟ್ ಕಾರ್ಡ್’ ಮಂಡಿಸುವ ಸಿಎಂ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 6:22 IST
Last Updated 10 ಸೆಪ್ಟೆಂಬರ್ 2022, 6:22 IST
   

ಬೆಂಗಳೂರು /ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ‘ಜನಸ್ಪಂದನ’ ಸಮಾವೇಶಕ್ಕೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಸಜ್ಜಾಗಿದೆ. 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಆಶಯದಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

‘ಜನೋತ್ಸವ’ದ ಹೆಸರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಮೂರು ಬಾರಿ ಮುಂದೂಡಿಕೆಯಾಗಿತ್ತು. ಇದೀಗ ‘ಜನಸ್ಪಂದನ’ದ ಹೆಸರಿನಲ್ಲಿ ನಡೆಯುತ್ತಿದೆ.ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಧುಗಿರಿಯಿಂದ ಕಾರ್ಯಕರ್ತರು ಮತ್ತು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ ಐದು ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ವ್ಯಕ್ತಿಯ ಉತ್ಸವ ಅಲ್ಲ:ದೊಡ್ಡಬಳ್ಳಾಪುರದಲ್ಲಿ ಸಮಾವೇಶದ ಜಾಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ನೇತೃತ್ವ ವಹಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ‘ನಮ್ಮದು ಏಕ ವ್ಯಕ್ತಿ ಕೇಂದ್ರಿತ ಉತ್ಸವವಲ್ಲ. ಜನರ ಸ್ಪಂದನೆಯ ಉತ್ಸವ. ಇದರಲ್ಲಿ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳಾದ ರೈತರು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ಬಿ.ಎಸ್‌.ಯಡಿಯೂರಪ್ಪ ಅವರ ಎರಡು ವರ್ಷಗಳ ಅವಧಿ ಮತ್ತು ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷದ ಆಡಳಿತದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡ ರಿಪೋರ್ಟ್‌ ಕಾರ್ಡ್‌ ಅನ್ನು ಜನರ ಮುಂದಿಡಲಾಗುವುದು’ ಎಂದರು.

‘ಕಾಂಗ್ರೆಸ್‌ನವರು ಸಿದ್ದರಾಮೋತ್ಸವ ಮಾಡಿಕೊಂಡರು. ನಾವು ಅವರ ಕಾರ್ಯಕ್ರಮಕ್ಕೂ ಮೊದಲೇ ಯೋಜನೆ ರೂಪಿಸಿದ್ದೆವು. ನಮ್ಮ ಪಕ್ಷದ ಕಾರ್ಯಕರ್ತನ ಹತ್ಯೆಯಿಂದ ಕಾರ್ಯಕ್ರಮ ಮುಂದೂಡಿದ್ದೆವು. ಕಾಂಗ್ರೆಸ್‌ನವರು ಯಾರು ಸತ್ತರೂ, ನೆರೆ ಬಂದರೂ ಲೆಕ್ಕಕ್ಕೇ ಇಡದೇ ಕಾರ್ಯಕ್ರಮ ಮಾಡಿಕೊಂಡರು. ನಾವು ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರ ಹುಟ್ಟಿದ ಹಬ್ಬ ಆಚರಿಸುತ್ತಿಲ್ಲ’ ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಛತ್ತೀಸಘಡದಲ್ಲಿ ಪಕ್ಷದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಈ ಕಾರ್ಯಕ್ರಮಕ್ಕೆ ಬರುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ, ನಳಿನ್‌ಕುಮಾರ್‌ ಕಟೀಲ್‌ ಸೇರಿ ಪಕ್ಷದ ಎಲ್ಲ ಸಚಿವರು, ಪ್ರಮುಖ ನಾಯಕರು ಭಾಗವಹಿಸುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಗೌಡ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.