ADVERTISEMENT

ಪ್ರಜಾವಾಣಿ ಸಂವಾದ: ‘ಭಿನ್ನಮತ ಭುಗಿಲೇಳಲು ಹೈಕಮಾಂಡ್‌ ಕುಮ್ಮಕ್ಕು’

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 17:40 IST
Last Updated 7 ಜೂನ್ 2021, 17:40 IST
ಪ್ರಜಾವಾಣಿ ಸಂವಾದ
ಪ್ರಜಾವಾಣಿ ಸಂವಾದ   

ಬೆಂಗಳೂರು: ‘ಬಿಜೆಪಿಯಲ್ಲಿ ನೋವುಗಳೆಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ’ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್ ಹೇಳಿದರೆ, ‘ಯೋಗೇಶ್ವರ್‌ಗೆ ಸಿದ್ಧಾಂತವೇ ಇಲ್ಲ– ಯತ್ನಾಳ ಹಿಂದೆ ಐದು ಶಾಸಕರಿಲ್ಲ’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌ ಕುಟುಕಿದರು. ‘ರಾಜ್ಯದಲ್ಲಿರುವುದು ಮಿಶ್ರಣ ಸರ್ಕಾರ; ಹೈಕಮಾಂಡ್‌ ಕುಮ್ಮಕ್ಕಿನಿಂದ ಭಿನ್ನಮತ ಭುಗಿಲೆದ್ದಿದೆ’ ಎಂದು ರಾಜಕೀಯ ವಿಶ್ಲೇಷಕ ಎ. ನಾರಾಯಣ ಅಭಿಪ್ರಾಯ ಪಟ್ಟರು.

‘ರಾಜ್ಯ ಬಿಜೆಪಿಯಲ್ಲಿ ಏಕೆ ಭಿನ್ನಮತ ಭುಗಿಲೆದ್ದಿದೆ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ನೇರ ಸಂವಾದದಲ್ಲಿ ಪಾಲ್ಗೊಂಡ ಈ ಪ್ರಮುಖರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.

‘ಮೊದಲು ಪಾರ್ಶ್ವವಾಯು ಹೊಡೆಯಲಿದೆ’

ADVERTISEMENT

ಪಾರದರ್ಶಕತೆ ಇಲ್ಲದ ಆಡಳಿತಕ್ಕೆ ಮೊದಲು ಪಾರ್ಶ್ವವಾಯು ಹೊಡೆಯಲಿದೆ, ಬಳಿಕ ಪ್ರಾಣವಾಯುವೇ ಹೋಗಲಿದೆ. ಯಾವುದೇ ಸರ್ಕಾರ ಮೊದಲಿಗೆ ಸಹಮತದೊಂದಿಗೆ ಆರಂಭವಾಗುತ್ತದೆ. ದಿನ ಕಳೆದಂತೆ ಅಧಿಕಾರ ಕೇಂದ್ರೀಕೃತವಾಗುತ್ತ ಹೋದರೆ ಭಿನ್ನಮತ ಶುರುವಾಗುತ್ತದೆ. ಶಾಸಕರಿಗೆ ತಮ್ಮದೇ ಆದ ನೋವುಗಳಿರುತ್ತವೆ. ಅವರ ಭಾವನೆಗಳನ್ನು ಹೇಳಿಕೊಳ್ಳಲು ಇರುವ ವೇದಿಕೆ ಎಂದರೆ ಶಾಸಕಾಂಗ ಪಕ್ಷದ ಸಭೆ. ಅದನ್ನೇ ನಡೆಸದಿದ್ದರೆ ಶಾಸಕರು ಮತ್ತೆಲ್ಲಿ ಪ್ರಶ್ನಿಸಬೇಕು? ಹೀಗೆ ಸತ್ಯ ಹೇಳಿದರೆ ಮಂತ್ರಿಗಿರಿ ಸಿಗದಿದ್ದಕ್ಕೆ ಮಾತನಾಡುತ್ತಾರೆ ಎಂಬ ಆರೋಪಗಳು ಬರುತ್ತವೆ. ನಾನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಚುನಾವಣೆಯಲ್ಲಿ ಸೋತಿದ್ದೇಕೆ, ನಿನ್ನ ನೋವುಗಳೇನು ಎಂದು ಯಾರೂ ಕೇಳಿಲ್ಲ. ಮುನಿರತ್ನ, ಪ್ರತಾಪ್‌ಗೌಡ ಪಾಟೀಲ, ಶಂಕರ್ ಕತೆಗಳು ಏನಾಗಿವೆ. ಯಾರ ಕಷ್ಟ ಏನು ಎಂಬುದನ್ನು ಒಮ್ಮೆಯೂ ಕೇಳಿಲ್ಲ. ಈ ನೋವುಗಳೆಲ್ಲವೂ ಬೂದಿಮುಚ್ಚಿದ ಕೆಂಡದಂತೆ ಇವೆ. ಯಡಿಯೂರಪ್ಪ ಹೊರತುಪಡಿಸಿ ಬಿಜೆಪಿಯಲ್ಲಿ ಬೇರೆ ನಾಯಕರಿಲ್ಲ ಎಂದಲ್ಲ. ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ಅರ್ಹತೆ ಇದೆಯೋ ಇಲ್ಲವೋ ಎಂಬುದು ಅವಕಾಶ ಕೊಟ್ಟಾಗ ಗೊತ್ತಾಗಲಿದೆ.

-ಎಚ್. ವಿಶ್ವನಾಥ್‌, ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ

ಯೋಗೇಶ್ವರ್‌ಗೆ ಸಿದ್ಧಾಂತವಿಲ್ಲ

ಬಿಜೆಪಿಯಲ್ಲಿ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂಬುದನ್ನು ಒಪ್ಪಲಾಗದು. ಒಂದಿಬ್ಬರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಬಸವನಗೌಡ ಪಾಟೀಲ ಯತ್ನಾಳ್ ಹಿಂದೆ ಐದು ಶಾಸಕರೂ ಇಲ್ಲ. ಯತ್ನಾಳ್ ಅವರಿಗೆ ಮಂತ್ರಿಗಿರಿ ಸಿಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ವಿಧಾನಸಭೆ, ಲೋಕಸಭೆ ಉಪಚುನಾವಣೆ, ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದಿವೆ. ಯತ್ನಾಳ್ ಅವರ ಮಾತುಗಳಿಂದ ಈ ಚುನಾವಣೆಗಳ ಮೇಲೆ ಸಣ್ಣ ಪರಿಣಾಮವೂ ಬೀರಿಲ್ಲ. ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೆ ರಾಜಕೀಯ ಸಿದ್ಧಾಂತವೇ ಇಲ್ಲ. ಅವರು ಪಕ್ಷಾಂತರ ಮಾಡಲು ಉಳಿದಿರುವ ಪಕ್ಷ ಯಾವುದು? ನಮ್ಮ ರಾಜ್ಯದಲ್ಲಿ ಅಸ್ಥಿತ್ವದಲ್ಲೇ ಇಲ್ಲದ ಸೈಕಲ್ ಚಿನ್ಹೆಯ ಸಮಾಜವಾದಿ ಪಕ್ಷಕ್ಕೂ ಹೋಗಿ ಬಂದರು. ಅವರ ಮಾತುಗಳಿಗೆ ಗೌರವ ಇಲ್ಲ. ಹೀಗೆ ಭಿನ್ನ ಅಭಿಪ್ರಾಯ ಹೊಂದಿದ ಮುಖಂಡರು ದೆಹಲಿಗೆ ಹೋದರೆ ಹೈಕಮಾಂಡ್‌ ನಾಯಕರು ಭೇಟಿಗೆ ಸಮಯವನ್ನೇ ಕೊಡುತ್ತಿಲ್ಲ. ಈ ಭಿನ್ನಮತಕ್ಕೆ ಹೈಕಮಾಂಡ್‌ ಕುಮ್ಮಕ್ಕು ಇದೆ ಎಂಬುದು ಸುಳ್ಳು.

-ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ರಾಜಕೀಯ ಮಿಶ್ರಣದ ಸರ್ಕಾರ

ರಾಜ್ಯದಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ. ಅದೊಂದು ರಾಜಕೀಯ ಮಿಶ್ರಣದ ಸರ್ಕಾರ. ಸರ್ಕಾರ, ಆಳುವ ಪಕ್ಷ, ಖರೀದಿ ಗುಂಪು ಹೀಗೆ ಹಲವು ಗುಂಪುಗಳಿವೆ. ಇಷ್ಟೊಂದು ಗುಂಪುಗಳಿರುವ ಸರ್ಕಾರಕ್ಕೆ ಹೈಕಮಾಂಡ್ ಕುಮ್ಮಕ್ಕಿನ ಭಿನ್ನಮತ ಕಾಡುತ್ತಿದೆ. ದೇವರಾಜ ಅರಸು ಕಾಲದಲ್ಲಿ ಬಿಟ್ಟರೆ, ಒಬ್ಬ ಮುಖ್ಯಮಂತ್ರಿ ವಿರುದ್ಧ ಹೈಕಮಾಂಡ್‌ ಕುಮ್ಮಕ್ಕಿನ ಭಿನ್ನಮತವನ್ನು ರಾಜ್ಯ ಕಂಡಿರಲಿಲ್ಲ. ಹೈಕಮಾಂಡ್‌ ಕೈವಾಡ ಇಲ್ಲದಿದ್ದರೆ ಭಿನ್ನ ರಾಗದವರ ವಿರುದ್ಧ ಶಿಸ್ತುಕ್ರಮಗಳು ಯಾವಾಗಲೋ ಜರುಗಬೇಕಿತ್ತು. ಯಡಿಯೂರಪ್ಪ ಅವರನ್ನು ಕೈಬಿಟ್ಟು ಸರ್ಕಾರ ಉಳಿಸಿಕೊಳ್ಳುವ ಅಥವಾ ಮುಂದಿನ ಚುನಾವಣೆ ಎದುರಿಸುವ ಶಕ್ತಿಯೂ ಬಿಜೆಪಿಗೆ ಇಲ್ಲ. ಹೀಗಾಗಿ, ಹೈಕಮಾಂಡ್‌ನಲ್ಲಿ ಇರುವ ಕೆಲವರು ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಹೆಜ್ಜೆ ಇಡುತ್ತಿಲ್ಲ. ಈ ರೀತಿಯ ಭಿನ್ನಮತ ನಿಭಾಯಿಸಲು ಗಟ್ಟಿಯಾದ ನಾಯಕತ್ವ ಬೇಕು. ಯಡಿಯೂರಪ್ಪ ಅವರನ್ನು ‘ರಾಜಾಹುಲಿ’ ಎಂದು ಮಾಧ್ಯಮಗಳು ಕರೆದರೂ, ತಮ್ಮ ಸ್ಥಾನ ಉಳಿಸಿಕೊಳ್ಳುವ ಗಟ್ಟಿತನ ಅವರಲ್ಲಿ ಇದೆಯೇ ಎಂಬುದು ಈಗಿನ ಪ್ರಶ್ನೆ.

–ಎ.ನಾರಾಯಣ, ರಾಜಕೀಯ ವಿಶ್ಲೇಷಕ, ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.