ADVERTISEMENT

ಗಾಂಧಿ‌ ಹೆಸರು ಬಳಕೆಗೆ ಜಟಾಪಟಿ: ಇಂದಿರಾ ಗಾಂಧಿ ಆಗಿದ್ದೇಗೆ? - ಬಿಜೆಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:11 IST
Last Updated 7 ಏಪ್ರಿಲ್ 2021, 16:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದಲ್ಲಿ ಈಗಿರುವುದು ನಕಲಿ ಕಾಂಗ್ರೆಸ್ ಪಕ್ಷ ಹಾಗೂ ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ದನಿಗೂಡಿಸಿರುವ ರಾಜ್ಯ ಬಿಜೆಪಿ, ಹೌದು, ಕೇಂದ್ರ ಸಚಿವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ. ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ? ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್‌ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ ಇಂದಿರಾ ಫಿರೋಜ್‌ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ? ಎಂದು ಹೇಳಿದೆ.

ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ. ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು. ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ? ಎಂದು ಬಿಜೆಪಿ ಟೀಕಿಸಿದೆ.

ADVERTISEMENT

ಫಿರೋಜ್‌ ಗ್ಯಾಂಡಿ ಮತ್ತು ಇಂದಿರಾ ಪ್ರಿಯದರ್ಶಿನಿ ಅವರ ಪುತ್ರ ರಾಜೀವ್‌ ಅವರು ರಾಜೀವ್ ಫಿರೋಜ್‌ ಆಗಬೇಕಿತ್ತು. ‌ರಾಜೀವ್ ಗಾಂಧಿ ಆಗಿದ್ದು ಹೇಗೆ? ರಾಬರ್ಟ್‌ ವಾದ್ರಾರನ್ನು ಮದುವೆಯಾದ ಪ್ರಿಯಾಂಕ ಅವರು ಪ್ರಿಯಾಂಕ ವಾದ್ರಾ ಆಗಬೇಕಿತ್ತು. ಪ್ರಿಯಾಂಕ ಗಾಂಧಿ ಆಗಿದ್ದೇಗೆ? ಗಾಂಧಿ ನಾಮ ನಕಲಿಯೋ ಅಥವಾ ಕುಟುಂಬವೇ ನಕಲಿಯೋ? ಎಂದು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದೆ.

ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ? ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಎಂದು ‌ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಎ. ಓ. ಹ್ಯೂಮ್ ಎಂಬ ಬ್ರಿಟೀಶ್‌ ವ್ಯಕ್ತಿಯಿಂದ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಮಹಾತ್ಮ ಗಾಂಧೀಜಿ ಸ್ವಾತಂತ್ರ ನಂತರ ವಿಸರ್ಜಿಸುವಂತೆ ಹೇಳಿದ್ದರು. ಆದರೆ, ರಾಜಕೀಯ ದುರಾಸೆಗೆ ಬಿದ್ದ ನೆಹರೂ ಕಾಂಗ್ರೆಸ್‌ ಪಕ್ಷವನ್ನು ಮುಂದುವರೆಸಿದರು. ನಕಲಿ ಗಾಂಧಿಗಳು, ಅಸಲಿ ಗಾಂಧೀಜಿ ನಿರ್ಧಾರಕ್ಕೆ ವಿರೋಧಿಸಿದರು. ಕಾಂಗ್ರೆಸ್ಸಿಗರೇ, ಭಾರತದಲ್ಲಿರುವುದು ಯಾವ ಕಾಂಗ್ರೆಸ್? ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಥವಾ ಇಂದಿರಾ ರಾಷ್ಟ್ರೀಯ ಕಾಂಗ್ರೆಸ್. ನಿಮ್ಮ ಗಾಂಧಿ ಕುಟುಂಬ ನಕಲಿ ಎಂಬುದು ಜಗಜ್ಜಾಹೀರಾಗಿದೆ, ಪಕ್ಷವೂ ನಕಲಿಯೇ? ಎಂದು ಪ್ರಶ್ನಿಸಿದೆ.

ದೇಶಕ್ಕೆ ಸತ್ಯದ ಅರಿವಾಗಬೇಕಿದೆ. ನಕಲಿ ಮುಖವಾಡಗಳ ಪರದೆ ಕಳಚಬೇಕಿದೆ.
(1) - ಕಾಂಗ್ರೆಸ್ ಎಂದರೆ ಯಾವುದು?
ಆಯ್ಕೆ 1 - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಆಯ್ಕೆ 2 - ಇಂದಿರಾ ರಾಷ್ಟ್ರೀಯ ಕಾಂಗ್ರೆಸ್
(2) - ನೆಹರೂ ಕುಟುಂಬ ಯಾವುದು?
ಆಯ್ಕೆ 1 - ಗ್ಯಾಂಡಿ
ಆಯ್ಕೆ 2 - ಗಾಂಧಿ
ಉತ್ತರಿಸುವಿರಾ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕರ್ನಾಟಕ ಕಾಂಗ್ರೆಸ್ ಎಂದು ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.