ADVERTISEMENT

ಪೆಟ್ರೋಲ್, ಡೀಸೆಲ್ ಎಕ್ಸೈಸ್‌ ಸುಂಕ ಕಡಿತ ಮಹತ್ವದ ಕ್ರಮ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 22 ಮೇ 2022, 1:35 IST
Last Updated 22 ಮೇ 2022, 1:35 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕವನ್ನು ಕಡಿಮೆ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡುತ್ತಿರುವುದರಿಂದ ಪೆಟ್ರೋಲ್‌ ಮಾರಾಟ ದರವು ಲೀಟರಿಗೆ ₹9.5 ಮತ್ತು ಡೀಸೆಲ್‌ ದರವು ಲೀಟರಿಗೆ ₹7ರಷ್ಟು ಕಡಿಮೆ ಆಗಲಿದೆ. ರಾಜ್ಯದ ಜನತೆಯ ಪರವಾಗಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಅಡುಗೆ ಅನಿಲದ ಪ್ರತಿ ಸಿಲಿಂಡರ್‌ಗೆ ₹2೦೦ ರಂತೆ ವಾರ್ಷಿಕವಾಗಿ ಒಟ್ಟು 12 ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು ನೀಡಲಿರುವುದು ಬಡವರ ಪಾಲಿಗೆ ಅತ್ಯಂತ ಮಹತ್ತರವಾಗಿದೆ. ಹಣದುಬ್ಬರ ನಿಯಂತ್ರಣ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವೆಂದು ಕಟೀಲ್ ಹೇಳಿದ್ದಾರೆ.

ಬಿಜೆಪಿ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಹಿತ ದೃಷ್ಠಿಯಿಂದ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಮಾಡಿರುತ್ತವೆ. ಆದರೆ ವಿರೋಧ ಪಕ್ಷಗಳ ಆಡಳಿತದ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಿಂಚಿತ್ತೂ ದರ ಕಡಿಮೆ ಮಾಡುವ ಕ್ರಮ ಕೈಗೊಳ್ಳದಿರುವುದು ಅವರ ಜನವಿರೋಧಿ ನೀತಿಯನ್ನು ತೋರಿಸುತ್ತದೆ. ಇನ್ನಾದರೂ ಇವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಗೊಳಿಸುವ ಕ್ರಮ ಅನುಷ್ಠಾನ ಮಾಡಲಿ ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.