ADVERTISEMENT

ಬಿಜೆಪಿ ಕಾರ್ಯಕಾರಿಣಿಯ ಹುರುಪು ಕಸಿದ ಸಚಿವರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 21:30 IST
Last Updated 15 ಏಪ್ರಿಲ್ 2022, 21:30 IST
ಶನಿವಾರದಿಂದ ಆರಂಭಗೊಳ್ಳಲಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹೊಸಪೇಟೆ ಸಂಪೂರ್ಣ ಸಜ್ಜಾಗಿದ್ದು, ಕಾರ್ಯಕ್ರಮ ನಡೆಯಲಿರುವ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಹಂಪಿ ವಾಸ್ತುಶಿಲ್ಪ ಹೋಲುವ ಬೃಹತ್‌ ಸ್ವಾಗತ ಕಮಾನು ನಿರ್ಮಿಸಲಾಗಿದೆ
ಶನಿವಾರದಿಂದ ಆರಂಭಗೊಳ್ಳಲಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹೊಸಪೇಟೆ ಸಂಪೂರ್ಣ ಸಜ್ಜಾಗಿದ್ದು, ಕಾರ್ಯಕ್ರಮ ನಡೆಯಲಿರುವ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಹಂಪಿ ವಾಸ್ತುಶಿಲ್ಪ ಹೋಲುವ ಬೃಹತ್‌ ಸ್ವಾಗತ ಕಮಾನು ನಿರ್ಮಿಸಲಾಗಿದೆ   

ಬೆಂಗಳೂರು: ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ, ರಾಜ್ಯ ಸರ್ಕಾರದ ವಿರುದ್ಧದ ಶೇ 40 ಕಮಿಷನ್‌ ಆರೋಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಪ್ರಕರಣದ ಕರಿನೆರಳು ಆವರಿಸಿದೆ.

ವರ್ಷಕ್ಕೂ ಮೊದಲೇ ವಿಧಾನಸಭಾ ಚುನಾವಣೆಯ ತಯಾರಿಗೆ ಚಾಲನೆ ನೀಡುವ ಸಿದ್ಧತೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ. ರಾಜ್ಯ ಕಾರ್ಯಕಾರಿಣಿಯ ಮೂಲಕವೇ ಚುನಾವಣಾ ಕಹಳೆ ಮೊಳಗಿಸಲು ಮುಂದಾಗಿದ್ದರು. ಆದರೆ, ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಿಂದ ಸಚಿವರೊಬ್ಬರು ರಾಜೀನಾಮೆ ಕೊಡುವಂತಾಗಿರುವುದು ಕಮಲ ಪಾಳಯದ ಹುರುಪು ಕಸಿದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ 800 ಪ್ರತಿನಿಧಿಗಳು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಕೂಡ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವರು.

ADVERTISEMENT

ನಡ್ಡಾ ಮತ್ತು ಸಂತೋಷ್‌ ಮೂಲಕ ಚುನಾವಣಾ ತಯಾರಿಯ ಸಂದೇಶ ರವಾನಿಸಲು ಬಿಜೆಪಿ ರಾಜ್ಯ ನಾಯಕರು ಯೋಜನೆ ರೂಪಿಸಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು ಪ್ರಚಾರ, ಬೆಲೆ ಏರಿಕೆ ವಿರುದ್ಧದ ಆಕ್ರೋಶ ತಣಿಸಲು ಕಾರ್ಯತಂತ್ರ ರೂಪಿಸುವುದು ಸೇರಿದಂತೆ ಚುನಾವಣೆಯನ್ನೇ ಕೇಂದ್ರೀಕರಿಸಿಕೊಂಡು ಕಾರ್ಯಕಾರಿಣಿಯಲ್ಲಿ ಚರ್ಚಿಸಲು ಕಾರ್ಯಸೂಚಿ ಸಿದ್ಧಪಡಿಸಿಕೊಂಡಿದ್ದರು.

ಮತಗಟ್ಟೆ ಹಂತದಿಂದ ರಾಜ್ಯ ಮಟ್ಟದವರೆಗೆ ಪಕ್ಷ ಸಂಘಟನೆ ಬಲಪಡಿಸಲು ಪಕ್ಷದ ಮುಖಂಡರನ್ನು ಅಣಿಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯಕಾರಿಣಿ ಸಭೆ ನಿಗದಿಪಡಿಸಲಾಗಿತ್ತು. ಆದರೆ, ಈ ಹೊತ್ತಿನಲ್ಲೇ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾದ ಆರೋಪಕ್ಕೆ ಗುರಿಯಾಗಿ ಸಚಿವ ಸ್ಥಾನದಿಂದ ಈಶ್ವರಪ್ಪ ಕೆಳಕ್ಕಿಳಿದಿರುವುದು ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳ ಮೊತ್ತದ ಶೇಕಡ 40ರಷ್ಟನ್ನು ಲಂಚವಾಗಿ ನೀಡಬೇಕಾದ ಸ್ಥಿತಿ ಇದೆ’ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2021ರ ನವೆಂಬರ್‌ನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ದೂರು ನೀಡಿದ್ದ
ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇನ್ನಷ್ಟು ಸಚಿವರು ಮತ್ತು ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ಕೇಳಿಬರುತ್ತಿವೆ. ಈ ಎಲ್ಲವೂ ಕಾರ್ಯಕಾರಿಣಿಯ ಚರ್ಚೆಯ ದಿಕ್ಕು ಬದಲಿಸುವ ಸಾಧ್ಯತೆ ಇದೆ’ ಎನ್ನುತ್ತವೆ ಬಿಜೆಪಿ ಮೂಲಗಳು.

ಪ್ರತಿಭಟನೆಯ ಬಿಸಿ: ಅತ್ತ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿರುವಾಗಲೇ ಈಶ್ವರಪ್ಪ ಬಂಧನಕ್ಕೆ
ಆಗ್ರಹಿಸಿ ರಾಜ್ಯದ ವಿವಿಧೆಡೆ ಸರಣಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಮುಂದಾಗಿದೆ. ಕಾರ್ಯಕಾರಿಣಿ ನಡೆಯಲಿರುವ ಹೊಸಪೇಟೆಯಲ್ಲಿ ಶಾಸಕ ಎಚ್‌.ಕೆ. ಪಾಟೀಲ ನೇತೃತ್ವದ ತಂಡ ಪ್ರತಿಭಟನೆ ನಡೆಸಲಿದೆ.

ಆಕಾಂಕ್ಷಿಗಳಲ್ಲಿ ಗರಿಗೆದರಿದ ನಿರೀಕ್ಷೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಕುರಿತು ಕಾರ್ಯಕಾರಿಣಿ ವೇಳೆಯಲ್ಲೇ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರಬಹುದು ಎಂಬ ನಿರೀಕ್ಷೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬಂದಾಗಲೇ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆ ಕುರಿತ ತೀರ್ಮಾನ ಕಾರ್ಯಕಾರಿಣಿ ವೇಳೆ ಹೊರಬೀಳಬಹುದು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುತ್ತಿದ್ದಾರೆ.

‘ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರ’

ವಿಜಯಪುರ: ‘ರಾಜ್ಯ ಸಚಿವ ಸಂಪುಟದ ವಿಸ್ತರಣೆ ಶೀಘ್ರವೇ ಆಗಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಶ್ವರಪ್ಪ ಅವರ ರಾಜೀನಾಮೆಯಿಂದ ತೆರವಾಗುವ ಸಚಿವ ಸ್ಥಾನ ಸೇರಿ ಒಟ್ಟು ಐದು ಸ್ಥಾನಗಳು ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.