ಬೆಂಗಳೂರು: ರಾಜಕೀಯ ಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ರಾಜ್ಯದ ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ಶಾಸಕ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ರೂಪಿಸಲಾಗಿದೆ. ಎನ್‍ಇಪಿ ಕರಡಿಗೆ ಸಿದ್ದರಾಮಯ್ಯ ಅವರ ಸರ್ಕಾರವೇ (2013-18) ಒಪ್ಪಿಗೆ ಕೊಟ್ಟಿತ್ತು. ಸಮಿತಿಯ ನೇತೃತ್ವವನ್ನು ಕಸ್ತೂರಿರಂಗನ್ ವಹಿಸಿದ್ದರು. ಈಗ ರಾಜಕೀಯ ಕಾರಣಗಳಿಗಾಗಿ ರದ್ದು ಮಾಡುವುದು ಸರಿಯಲ್ಲ ಎಂದರು.
‘ದೇಶದಲ್ಲಿ ಎನ್‌ಇಪಿ ಇದ್ದು, ರಾಜ್ಯದಲ್ಲಿ ಇಲ್ಲದಿದ್ದರೆ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಹೇಗೆ ಸಿದ್ಧವಾಗುತ್ತಾರೆ? ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಿನ್ನಡೆಯಾಗುತ್ತದೆ. ಸಿದ್ದರಾಮಯ್ಯ ಅವರು ರಾಜಕೀಯ ಕಾಮಾಲೆ ಕಣ್ಣಿನಿಂದ ನೋಡದೆ, ಮಕ್ಕಳ ಉಜ್ವಲ ಭವಿಷ್ಯ ಗಮನದಲ್ಲಿಟ್ಟುಕೊಂಡು ಪುನರ್ ಅವಲೋಕನ ಮಾಡಬೇಕು’ ಎಂದು ಸಲಹೆ ನೀಡಿದರು.
‘ಬಿಜೆಪಿ ಅವಧಿಯ ಕಾಮಗಾರಿಗಳನ್ನು ತನಿಖೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಈಗಾಗಲೇ ಹಲವು ವರದಿಗಳು ಬಂದಿವೆ. ಏನೂ ಇಲ್ಲವೆಂದು ಗೊತ್ತಾಗಿ ರಾಜಕೀಯಪ್ರೇರಿತ ತನಿಖೆಗಳು ನಡೆಯುತ್ತಿವೆ. ತನಿಖೆ ನಡೆದು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ. ಆದರೆ, ಕಾಲಹರಣ ಮಾಡುವುದು ಬೇಡ’ ಎಂದು ಕಿವಿಮಾತು ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಬಿಜೆಪಿಗೆ ಮತ ಕೊಡುವವರು ರಾಕ್ಷಸರು’ ಎಂಬ ಸುರ್ಜೇವಾಲಾರ ಹೇಳಿಕೆ ಖಂಡನೀಯ. ದೇಶದ ನಾಗರಿಕರಿಗೆ ಮಾಡಿದ ಅವಮಾನ. ಇಂತಹ ಹೇಳಿಕೆಗಳನ್ನು ಪ್ರತಿಯೊಬ್ಬ ನಾಗರಿಕರೂ ಖಂಡಿಸಬೇಕು. ಕಾಂಗ್ರೆಸ್ ತನ್ನನ್ನು ಸ್ವಚ್ಛವಾಗಿ ತೊಳೆದ ಮುತ್ತು ಎಂದುಕೊಂಡಿದೆ. ಕಾಂಗ್ರೆಸ್ ನಾಯಕರು ತಮ್ಮನ್ನು ಹರಿಶ್ಚಂದ್ರರು ಎಂದು ಭಾವಿಸಿದ್ದಾರೆ. 75 ವರ್ಷಗಳ ಇತಿಹಾಸ ಪರಿಶೀಲಿಸಿದರೆ ಅತ್ಯಂತ ಭ್ರಷ್ಟ, ಜನವಿರೋಧಿ ಸರ್ಕಾರ ಯಾವುದು. ಎಷ್ಟು ಕಾಂಗ್ರೆಸ್ ನಾಯಕರು ಜೈಲಿನಲ್ಲಿದ್ದರು ಎನ್ನುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.