ಮಂಗಳೂರು: 'ಪ್ರವೀಣ್ ಕುಟುಂಬದ ಒಬ್ಬನೇ ಮಗ. ಅವನನ್ನು ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವರ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಕುಟುಂಬಕ್ಕೆ ಗಟ್ಟಿಮುಟ್ಟಾದ ಮನೆ ಕಟ್ಟಿಕೊಡಲು ಪಕ್ಷದ ಪ್ರಮುಖರು ಹಾಗೂ ಈ ಭಾಗದ ಶಾಸಕರು ಸೇರಿ ತೀರ್ಮಾನಿಸಿದ್ದೇವೆ' ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಮನೆಗೆಗುರುವಾರ ಭೇಟಿ ನೀಡಿದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸುದ್ಧಿಗಾರರ ಜೊತೆ ನಾತನಾಡಿದ ಅವರು, 'ಈ ಘಟನೆ ದುರದೃಷ್ಟಕರ. ಪ್ರವೀಣ್ ಅವರ ಕುಟುಂಬಕ್ಕೊದಗಿದ ಸ್ಥಿತಿ ಕಂಡು ಏನು ಹೇಳಬೇಕೆಂದೇ ತೋಚುತ್ತಿಲ್ಲ. ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ. ಕುಟುಂಬಕ್ಕೆ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ ಅಷ್ಟೇ' ಎಂದರು.
'ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಕಾರ್ಯಕ್ರಮವನ್ನು ರದ್ದುಪಡಿಸಿ ಇದರ ತನಿಖೆ ಬಗ್ಗೆ ಗಮನ ಹರಿಸಿದ್ದಾರೆ. ಕಾರ್ಯಕರ್ತರು ಸಂಯಮದಿಂದ ಇರಬೇಕು' ಎಂದರು.
'ಪ್ರವೀಣ್ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವ ನಿಟ್ಟಿನಲ್ಲೂ ಪ್ರಯತ್ನಿಸುತ್ತೇವೆ' ಎಂದರು.
'ಕೃತ್ಯದ ಹಿಂದೆ ಯಾವುದೇ ಸಮಾಜ ಘಾತುಕ ಶಕ್ತಿಗಳ ಕೈವಾಡ ಇದ್ದರೂ ಅಂತಹವುಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಇಂತಹ ಹತ್ಯೆಗಳು ಜಾಸ್ತಿ ಆಗುತ್ತಿವೆ. ರಾಜಸ್ತಾನದಲ್ಲಿ ಟೈಲರ್ ಹತ್ಯೆ ನಡೆಯಿತು. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದೆ. ಸರಪಣಿಯಂತೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸಹಜವಾಗಿಯೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಈ ರೀತಿ ಆಗಬಾರದಿತ್ತು' ಎಂದರು.
'ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಉತ್ತರ ಪ್ರದೇಶ ಮಾದರಿಯ ಕಾನೂನು ಸಾಲದು, ಅದಕ್ಕಿಂತಲೂ ಹೆಚ್ಚಿನ ಕ್ರಮದ ಅಗತ್ಯ ಇದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಕಾರ್ಯಕರ್ತರು ಮಾತ್ರ ಅಲ್ಲ ಎಲ್ಲರ ಜೀವವೂ ಅಮೂಲ್ಯ. ಆರೋಪಿಗಳಿಗೆ ಜಾಮೀನು ಸಿಗಬಾರದು. ಆ ರೀತಿ ಕ್ರಮ ವಹಿಸಬೇಕು' ಎಂದು ಒತ್ತಾಯಿಸಿದರು.
ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ಶೆಟ್ಟಿ ಉಳೆಪಾಡಿ ಹಾಗೂ ಪಕ್ಷದ ಪ್ರಮುಖರು ಜೊತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.