ADVERTISEMENT

ರಾಜೀನಾಮೆ ಮೂಲಕ ಸಿಎಂ ಪ್ರಾಯಶ್ಚಿತ ಮಾಡಿಕೊಳ್ಳಬೇಕಿತ್ತು: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:54 IST
Last Updated 17 ಅಕ್ಟೋಬರ್ 2024, 14:54 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಜಯಂತಿಯ ದಿನದಂದೇ ರಾಜೀನಾಮೆ ನೀಡಿ ಪ್ರಾಯಶ್ಚಿತ ಮಾಡಿಕೊಳ್ಳಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣದ ಕುರಿತಂತೆ ಜಾರಿ ನಿರ್ದೇಶನಾಲಯದ ಚಾರ್ಚ್‌ಶೀಟ್‌ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯಕ್ಕೆ ಒಂದು ದಾಖಲೆಯಂತಿದೆ. ಅದನ್ನು ಓದಿ ಪಶ್ಚಾತಾಪ ಪಟ್ಟು, ಗೌರವದಿಂದ ನಿರ್ಗಮಿಸಬೇಕಿತ್ತು ಎಂದರು.

ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಅಕ್ರಮವಾಗಿ ವರ್ಗಾವಣೆ  ಮಾಡಿಕೊಂಡಿದ್ದ ಹಣದಿಂದ ಕಾರು ಖರೀದಿ, ಕುಟುಂಬದ ವಿಮಾನ ಪ್ರಯಾಣದ ಟಿಕೆಟ್‌, ಪಟ್ರೋಲ್‌– ಡೀಸೆಲ್‌ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ ಪಾವತಿಸಿದ್ದನ್ನು ಉಲ್ಲೇಖಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆಯಾಗಿರುವುದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ ಎಂದರು.

ADVERTISEMENT

ಬಳ್ಳಾರಿ ಲೋಕಸಭಾ ಚುನಾವಣೆಗಾಗಿ ಮೂವರು ಶಾಸಕರ ಮೂಲಕ ₹14.80 ಕೋಟಿ ಬಳಕೆಯಾಗಿರುವುದು ಗೊತ್ತಾಗಿದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಶಾಸಕ ಭರತ್‌ ರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್‌ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್‌ ಅವರ ಮೂಲಕ ಸುಮಾರು ₹15 ಕೋಟಿ ವಿತರಣೆ ಮಾಡಿದ್ದಾರೆ ಎಂದು ದೂರಿದರು.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಲು ತಲಾ ₹10 ಸಾವಿರ ವೆಚ್ಚ ಮಾಡಿದ್ದಾರೆ. ಅಲ್ಲದೇ, ನಿಗಮದ ಹಣವನ್ನು ತೆಲಂಗಾಣ ಲೋಕಸಭಾ ಚುನಾವಣೆಗೂ ಉಪಯೋಗಿಸಿದ್ದಾರೆ ಎಂಬ ಅಂಶಗಳೂ ಗೊತ್ತಾಗಿವೆ ಎಂದು ಸದಾನಂದಗೌಡ ಹೇಳಿದರು.

ಪಾಪ ಪರಿಹಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಅತ್ಯಂತ ದೀನತೆಯಿಂದ ತಾವೇ ಕೈ ಹಾಕಿ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ, ಇವೆಲ್ಲ ನೋಡಿದಾಗ, ಅವರಿಗೆ ಪಶ್ಚಾತಾಪದಿಂದ ಜ್ಞಾನೋದಯ ಆದಂತೆ ಭಾಸವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ವಕ್ತಾರರಾದ ಡಾ.ನರೇಂದ್ರ ರಂಗಪ್ಪ, ಪ್ರಕಾಶ್‌ ಶೇಷರಾಘವಾಚಾರ್‌, ಎಚ್‌.ವೆಂಕಟೇಶ್‌ ದೊಡ್ಡೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.