ಮದ್ದೂರು: ‘ಆನೆ ನಡೆದುಕೊಂಡು ಹೋಗುತ್ತಿದ್ದರೆ, ಮುದಿನಾಯಿಯೊಂದು ಆನೆ ಈಗ ಬೀಳುತ್ತೆ, ಆಗ ಬೀಳುತ್ತೆ.. ಎಂದು ಕಾಯುತ್ತ ಕುಳಿತ ಹಾಗೇ ರಾಜ್ಯ ಬಿಜೆಪಿ ಮುಖಂಡರು ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಕಾದು ಕುಳಿತಿದ್ದಾರೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಶುಕ್ರವಾರ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜೆ.ಎಚ್.ಪಟೇಲ್ ಹೇಳಿಕೆ ನೆನಪಿಸಿಕೊಂಡು ಬಿಜೆಪಿ ನಾಯಕರನ್ನು ಮುದಿ ನಾಯಿಗೆ ಹೋಲಿಸಿದರು.
‘ಆನೆಯಂತೂ ಕೆಳಗೆ ಬೀಳಲಿಲ್ಲ, ನಾಯಿಗೆ ಏನೂ ಸಿಗಲಿಲ್ಲ. ಹಾಗೆ ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರದ ಮೇಲೆ ಕೆಟ್ಟಕಣ್ಣು. ಸರ್ಕಾರ ಬಂದಾಗಿನಿಂದಲೂ ಬೀಳುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ’ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಮ್ಮಿಶ್ರ ಸರ್ಕಾರದ ಬಗ್ಗೆ ಸಿದ್ದರಾಮಯ್ಯ, ಪರಮೇಶ್ವರ್ ಅಂಥವರು ಇಂಥ ಹೇಳಿಕೆ ಕೊಟ್ಟರೆ ಅದಕ್ಕೆ ಒಂದು ಅರ್ಥ ಇರುತ್ತದೆ. ಇಂಥವರು ನೀಡುವ ಹೇಳಿಕೆಗೆ ಯಾವುದೇ ಅರ್ಥ ಇಲ್ಲ’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.