ADVERTISEMENT

ಕಾಂಗ್ರೆಸ್‌ನ ಸೇಡಿನ ರಾಜಕಾರಣ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:14 IST
Last Updated 13 ಜೂನ್ 2024, 16:14 IST
ಬಿಜೆಪಿ ಧ್ವಜ
ಬಿಜೆಪಿ ಧ್ವಜ   

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಹಗೆತನದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿದರು.

ವಿಧಾನಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎನ್‌.ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಪ್ರಧಾನಕಾರ್ಯದರ್ಶಿ ಪಿ.ರಾಜೀವ್‌ ಜಂಟಿ ಹೇಳಿಕೆ ನೀಡಿದ್ದು, ತಾವು ಹಗೆತನದ ರಾಜಕಾರಣ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದರು. ಆದರೆ, ಇದೀಗ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

‘ಯಡಿಯೂರಪ್ಪ ಅವರು ದೆಹಲಿಯಲ್ಲಿದ್ದು, ಎರಡೇ ದಿನಗಳಲ್ಲಿ ಬರುವುದಾಗಿ ಹೇಳಿದ್ದರೂ ಗಡಿಬಿಡಿ ಮಾಡಿದ್ದಾರೆ. ನಾಲ್ಕು ತಿಂಗಳು ಇಲ್ಲದ ಗಡಿ ಬಿಡಿ ಕಾಂಗ್ರೆಸ್‌ಗೆ ಇವತ್ತು ಒಂದೇ ದಿನ ಬಂದಿದೆ. ಇವತ್ತೇ ಜಾಮೀನು ರಹಿತ ವಾರಂಟ್‌ ಪಡೆದು ಬಂಧನ ಮಾಡಲು ಹೋಗಿದ್ದಾರೆ’ ಎಂದು ಅವರು ದೂರಿದರು.

ADVERTISEMENT

‘ಪೋಕ್ಸೊ ಪ್ರಕರಣ ದಾಖಲಿಸಿ ನಾಲ್ಕು ತಿಂಗಳು ಕಾಲ ಕಳೆದಿದೆ. ಆಗ ನೀವೆಲ್ಲಿ ಮಲಗಿದ್ದೀರಿ ಎಂದು ಜನರು ಕೇಳುವಂತಾಗಿದೆ. ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಗೃಹ ಸಚಿವರೂ ಹೇಳಿದ್ದರು. ಇದೀಗ ರಾಹುಲ್‌ಗಾಂಧಿಯವರು ಕೋರ್ಟ್‌ ಮೆಟ್ಟಿಲು ಹತ್ತಿದ ಕಾರಣ ಬಿಜೆಪಿಯವರನ್ನೂ ಕೋರ್ಟಿಗೆ ತಂದು ನಿಲ್ಲಿಸಬೇಕೆಂಬ ಕಾಂಗ್ರೆಸ್‌ ಪಕ್ಷದ ದುರುದ್ದೇಶವು ಈಗ ಬಯಲಾಗಿದೆ’ ಎಂದು ಹೇಳಿದರು.

‘ಯಡಿಯೂರಪ್ಪ ವಿಚಾರದಲ್ಲಿ ಕೋರ್ಟ್‌ನಿಂದ ಬಂದ ಆದೇಶವನ್ನು ಗೌರವಿಸುತ್ತೇವೆ. ಆದರೆ, ಇದೊಂದು ರಾಜಕೀಯ ಷಡ್ಯಂತ್ರ ಅಥವಾ ರಾಜಕೀಯ ಪ್ರೇರಿತ ವಿಚಾರ. ಫೆಬ್ರುವರಿ 2 ರಂದು ಘಟನೆ ನಡೆದಿದೆ ಎಂದು ಹೇಳಿ ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಗ ಯಡಿಯೂರಪ್ಪ ಅವರು ಪೊಲೀಸ್‌ ಠಾಣೆಗೆ ಬಂದು ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ನಂತರ ಪೊಲೀಸ್‌ನವರು ಬರುವ ಅವಶ್ಯ ಇಲ್ಲ ಎಂದಿದ್ದರು. ಮನೆಗೆ ಬಂದು ಹೇಳಿಕೆಯನ್ನೂ ಪಡೆದಿದ್ದರು’ ಎಂದು ಹೇಳಿದರು.

‘ಈ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಕೇಸು ದಾಖಲಿಸಿದವರು ಮಾನಸಿಕ ಅಸ್ವಸ್ಥೆ, ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳ ಮೇಲೆ 60 ಕ್ಕೂ ಹೆಚ್ಚು ಕೇಸು ದಾಖಲಿಸಲಿದ್ದಾರೆ. ಆದ್ದರಿಂದ, ಆ ಕೇಸಿಗೆ ಮಹತ್ವ ಇಲ್ಲ ಎಂಬ ಮಾತನ್ನು ಹೇಳಿದ್ದರು’ ಎಂದರು.

‘ಈ ಪ್ರಕರಣದ ಬಿ ರಿಪೋರ್ಟ್‌ ನಿರೀಕ್ಷೆಯಲ್ಲಿದ್ದೆವು. ಆದರೆ ಕಳೆದ ಎರಡು– ಮೂರು ದಿನಗಳಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ರಾಹುಲ್‌ಗಾಂಧಿ ಅವರ ಕೋರ್ಟ್‌ ಮೆಟ್ಟಿಲು ಹತ್ತುವಂತಾಗಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಗೆ ತೀರಿಸಿಕೊಳ್ಳಲು ಸುರ್ಜೇವಾಲಾ ಅವರ ಆದೇಶದಡಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಸೇರಿ ಈ ಷಡ್ಯಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕೇಸು ಕೊಟ್ಟವರು ತೀರಿಕೊಂಡಿದ್ದಾರೆ. ಕೇಸು ಕೊಟ್ಟ ಮಹಿಳೆಯ ಮಗನ ದೂರು ಪಡೆದು ತಕ್ಷಣಕ್ಕೆ ಕೋರ್ಟ್‌ ಮೆಟ್ಟಿಲು ಹತ್ತಿದ ಪೊಲೀಸರು ಹೀಗೆ ಮಾಡಿದ್ದಾರೆ’ ಎಂದು ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.