ಬೆಂಗಳೂರು: ಇನ್ನು ಮುಂದೆ ಪ್ರತಿ ಗುರುವಾರ ಬಿಜೆಪಿ ಶಾಸಕರನ್ನು ವೈಯಕ್ತಿಕವಾಗಿ ಮತ್ತು ಗುಂಪಿನಲ್ಲಿ ಭೇಟಿಯಾಗುವುದರ ಜತೆಗೆ ಅಧಿವೇಶನ ನಡೆಸುವ ಸಂದರ್ಭದಲ್ಲಿ ಪ್ರತಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಕಷ್ಟು ಶಾಸಕರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಅದನ್ನು ಕೇಳಿಸಿಕೊಂಡು ಪರಿಹಾರ ಕಲ್ಪಿಸಲು ಪ್ರತಿ ಗುರುವಾರ ‘ಶಾಸಕರ ದಿನ’ವಾಗಿ ಪರಿಗಣಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಜತೆಗೆ ವಿಧಾನಮಂಡಲ ಅಧಿವೇಶನ ನಡೆಯುವಾಗ ಪ್ರತಿ ಮಂಗಳವಾರ ಬೆಳಿಗ್ಗೆ 9.30 ರಿಂದ 11 ರವರೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ. ಪಕ್ಷಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲು ವೇದಿಕೆ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.
ಸರ್ಕಾರ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರಾಜ್ಯದ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಶಾಸಕರು ಮಾಡಬೇಕು. ಈ ಸಂಬಂಧ ಯಾವುದೇ ಗೊಂದಲ ಇದ್ದರೆ ಅದರ ನಿವಾರಣೆ ಮಾಡಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ಆನ್‌ಲೈನ್ ಜೂಜು ನಿಷೇಧಿಸುವ ಸಂಬಂಧಿಸಿದ ಮಸೂದೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂದಕ್ಕೆ ಪಡೆದು ಪ್ರತ್ಯೇಕ ಪ್ರಾಧಿಕಾರಕ್ಕೆ ವಹಿಸುವ ಮಸೂದೆಯೂ ಸೇರಿ ಹಲವು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ಬೆಲೆ ಏರಿಕೆ, ರಾಷ್ಟ್ರೀಯ ಶಿಕ್ಷಣ ನೀತಿ, ಕೋವಿಡ್ ನಿರ್ವಹಣೆ ಸೇರಿದಂತೆ ಯಾವುದೇ ವಿಷಯದ ಬಗ್ಗೆ ವಿಧಾನ
ಮಂಡಲದಲ್ಲಿ ವಿರೋಧ ಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡಲು ನಿರ್ಧರಿಸಲಾಗಿದೆ ಎಂದರು.
ವಿರೋಧ ಪಕ್ಷಗಳ ಎಲ್ಲ ಆರೋಪಗಳಿಗೂ ಒಗ್ಗಟ್ಟಿನಿಂದ ಶಾಸಕರು ಉತ್ತರಿಸಬೇಕು. ಇತ್ತೀಚೆಗೆ ನಡೆದ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ಬಿಬಿಎಂಪಿ ಚುನಾವಣೆಯನ್ನು ಗೆದ್ದು, ವಿಧಾನಸಭೆ ಚುನಾವಣೆಯನ್ನು ಗೆಲ್ಲಬೇಕಾಗಿದೆ. ಇದಕ್ಕಾಗಿ ಈಗಿನಿಂದಲೇ ಶ್ರಮವಹಿಸಬೇಕು ಎಂದು ಬೊಮ್ಮಾಯಿ ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಹಿಂದೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್ ಲಾಕ್‌ಡೌನ್ ಮತ್ತು ಪ್ರವಾಹ ಸಂತ್ರಸ್ತರಿಗೆ ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇದೆ. ಇನ್ನು ಮುಂದೆಯೂ ವಿಶ್ವಾಸ ಗಳಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದರು.
ಆರೋಗ್ಯಪೂರ್ಣ ಚರ್ಚೆಗೆ ವೇದಿಕೆ
‘ಇವತ್ತಿನ ಶಾಸಕಾಂಗ ಪಕ್ಷದ ಸಭೆ ಹಿಂದಿನ ಸಭೆಗಳಂತೆ ಇರಲಿಲ್ಲ. ಸಂಪೂರ್ಣ ಸೌಹಾರ್ದಯುತ ಮತ್ತು ಆರೋಗ್ಯಪೂರ್ಣ ಚರ್ಚೆಗೆ ವೇದಿಕೆ ಆಗಿತ್ತು’ ಎಂದು ಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುಖ್ಯಮಂತ್ರಿಯವರೇ ಸ್ವತಃ ಕೆಲವು ಆಲೋಚನೆಗಳನ್ನು ಮುಂದಿಟ್ಟಿದ್ದು, ಶಾಸಕರಿಗೆ ತೃಪ್ತಿ ತಂದಿತು. ಪಕ್ಷ ಮತ್ತು ಸರ್ಕಾರವನ್ನು ಸರಿಯಾದ ಹಳಿಯ ಮೇಲೆ ಒಯ್ಯುವ ಒಂದು ವೇದಿಕೆ ಸಜ್ಜು ಮಾಡಿದಂತಾಗಿದೆ’ ಎಂದರು.
‘ಪಕ್ಷಕ್ಕೆ ಇಂತಹದ್ದೊಂದು ಕಾಯಕಲ್ಪದ ಅಗತ್ಯವಿತ್ತು. ಅದರ ಮೊದಲ
ಹೆಜ್ಜೆ ಇದಾಗಿದೆ. ಸದನದ ಒಳಗೆ ಮತ್ತು ಹೊರಗೆ ಪಕ್ಷದ ಶಾಸಕರು ಒಗ್ಗಟ್ಟಿನಿಂದ ಹೆಜ್ಜೆ ಇಡಲು ಇದು ಸಹಾಯಕವಾಗುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.