ಬೆಂಗಳೂರು: ‘ವಿಧಾನಪರಿಷತ್ತಿನಲ್ಲಿ ಉಪಸಭಾಪತಿ ಮೇಲೆ ಎರಗಿ ಕೊರಳು ಪಟ್ಟಿಗೆ ಕೈಹಾಕಿ ಎಳೆದುಹಾಕಿದ ಕಾಂಗ್ರೆಸ್
ಸಚೇತಕ ನಾರಾಯಣಸ್ವಾಮಿ, ಸದಸ್ಯರಾದ ನಜೀರ್ ಅಹ್ಮದ್, ಶ್ರೀನಿವಾಸಮಾನೆ, ಪ್ರಕಾಶ್ ರಾಥೋಡ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಅವರು ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರಿಗೆ ದೂರು ನೀಡಿದ್ದಾರೆ.
‘ಚಂದ್ರಶೇಖರ ಪಾಟೀಲ ಮತ್ತು ನಾರಾಯಣಸ್ವಾಮಿ ಸಭಾಪತಿ ಪೀಠದ ಮೇಲೆ ಅಕ್ರಮವಾಗಿ ಕೂರುವ ಮೂಲಕ ಪರಿಷತ್ತಿನ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಸಾಂವಿಧಾನಿಕ ಹುದ್ದೆಗಳಾದ ಸಭಾಪತಿ ಮತ್ತು ಉಪಸಭಾಪತಿಯವರ ಮೇಲೆ ಹಲ್ಲೆಯಂತಹ ದುರ್ವರ್ತನೆ ಸಹಿಸಲು ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಕಠಿಣ ಕ್ರಮದ ಮೂಲಕ ನೀವು ಇಂದಿನ ಶಾಸಕರು ಮತ್ತು ಮುಂದಿನ ಪೀಳಿಗೆಯ ಶಾಸಕರಿಗೆ ಸಂದೇಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಉತ್ತಮ ಚಾರಿತ್ರ್ಯ, ನಿಷ್ಕಳಂಕ ಹಿನ್ನೆಲೆ ಹೊಂದಿರುವ ನೀವು ಸಭಾಪತಿ ಸ್ಥಾನದ ಗೌರವ ಕಾಪಾಡುವ ಬದಲು ನಿಮ್ಮ ಸ್ಥಾನವನ್ನು ಕಾಪಾಡಲು ಪ್ರಯತ್ನಿಸಿದ್ದು ದುರ್ದೈವ. ಇದರ ಪರಿಣಾಮ ಡಿ.10 ರಂದು ಸಂಜೆ 6.59 ಕ್ಕೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡುವ ಸಂದರ್ಭದಲ್ಲಿ ಕಾನೂನು ತಜ್ಞರ ಸಲಹೆ ಪಡೆದಿದ್ದೇನೆ. ಅವಿಶ್ವಾಸ ಸೂಚಕರಿಗೆ ಹಿಂಬರಹ ನೀಡಲು ಆದೇಶಿರು
ವುದಾಗಿ ರೂಲಿಂಗ್ ನೀಡಿದಿರಿ. ನಿಮ್ಮ ತೀರ್ಮಾನವನ್ನು ಸದನದಲ್ಲಿ ಏಕೆ ಪ್ರಕಟಿಸಲಿಲ್ಲ. ರೂಲಿಂಗ್ ನೀಡಿದ ಬಳಿಕ ನಿಮ್ಮ ಕೊಠಡಿಯಲ್ಲಿ 7.15 ಕ್ಕೆ ಸಹಿ ಹಾಕುವ ಮೂಲಕ ಕಡತ ಸೃಷ್ಟಿಸಿದ್ದು ಏಕೆ. ಇದು ಅಪ್ರಮಾಣಿಕತೆ ಅಲ್ಲವೆ’ ಎಂದು ಆಯನೂರು ಪ್ರಶ್ನಿಸಿದ್ದಾರೆ.
‘ಅವಿಶ್ವಾಸ ಗೊತ್ತುವಳಿ ಬಂದಾಗ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಡಿ.ಎಚ್.ಶಂಕರಮೂರ್ತಿಯವರು ಉತ್ತಮ ಪರಂಪರೆ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ಗೊತ್ತುವಳಿಯಲ್ಲಿ ಸಕಾರಣಗಳು ಮತ್ತು ಸಂಖ್ಯೆ ಇಲ್ಲದಿದ್ದರೂ, ಅವಿಶ್ವಾಸ ಮಂಡನೆಗೆ ಅವಕಾಶ ನೀಡಿದರು. ಚರ್ಚೆಗೆ ಅವಕಾಶವನ್ನೂ ನೀಡಿದರು. ಆ ಸಂದರ್ಭದಲ್ಲಿ ಅವರು ಪೀಠದಲ್ಲಿ ಕೂರಲಿಲ್ಲ. ಅವೆಲ್ಲವನ್ನು ನೀವೂ ನೋಡಿದ್ದೀರಿ ಅಲ್ಲವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.