ADVERTISEMENT

ಬಿಜೆಪಿ ಗೆಲ್ಲಲಿದೆ ಎಂಬ ರಾಜಕೀಯ ತಜ್ಞನ ಭವಿಷ್ಯ ನಿಜವಾಯ್ತು: ಏನು ಹೇಳಿದ್ದರವರು?

​ಪ್ರಜಾವಾಣಿ ವಾರ್ತೆ
Published 25 ಮೇ 2019, 3:56 IST
Last Updated 25 ಮೇ 2019, 3:56 IST
   

ಲೋಕಸಭೆ ಚುನಾವಣೆ ಸಮಾಪ್ತಿಗೊಂಡಿದೆ. ಬಿಜೆಪಿ ಪಕ್ಷವೊಂದೇ 303 ಸ್ಥಾನಗಳಲ್ಲಿ ಗೆದ್ದಿದೆ. ಕಾಂಗ್ರೆಸ್‌ 52 ಸ್ಥಾನಗಳನ್ನಷ್ಟೇ ಗೆದ್ದಿದೆ.ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಿದ್ದಾರೆ. ಆದರೆ, ಇದಕ್ಕೂ ಹಿಂದೆ ಫಲಿತಾಂಶದ ಬಗ್ಗೆಹಲವು ರಾಜಕೀಯ ತಜ್ಞರು ಹಲವು ಬಗೆಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಬಿಜೆಪಿಗೆ ಈ ಬಾರಿ ಅಧಿಕಾರ ಕೈತಪ್ಪಲಿದೆ, ಅತಂತ್ರ ಲೋಕಸಭೆ ಸೃಷ್ಟಿಯಾಗಲಿದೆ ಎಂದು ಹಲವರು ಹೇಳಿದರೆ, ಇಲ್ಲ, ಮೋದಿ ಮತ್ತೆ ಗೆದ್ದು ಬರಲಿದ್ದಾರೆ ಎಂದು ಹಲವರು ಹೇಳಿದ್ದರು. ಮೋದಿ ಅವರು ಮತ್ತೆ ಗೆದ್ದು ಬರಲಿದ್ದಾರೆ ಎಂದು ‘ಪ್ರಜಾವಾಣಿ’ಯೊಂದಿಗೆ ರಾಜಕೀಯ ತಜ್ಞ, ಸಾಮಾಜಿಕ ಅಭಿವೃದ್ಧಿ ಅಧ್ಯಯನ ಕೇಂದ್ರದ (Director of Centre for the Study of Developing Societies–CSDS) ನಿರ್ದೇಶಕ ಸಂಜಯ್‌ ಕುಮಾರ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಬಹುತೇಕ ಅವರು ಹೇಳಿದಂತೆಯೇ ಈ ಚುನಾವಣೆ ಫಲಿತಾಂಶ ಬಂದಿದೆ. ಅವರ ಅಭಿಪ್ರಾಯವನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನವಿದು. ಅಂದು ಅವರು ಏನು ಹೇಳಿದ್ದರು? ನೀವೇ ಓದಿ

ಮೊದಲಿಗೆ, ಬಿಜೆಪಿಯು ಈ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮುಲಿದೆ. ನನ್ನ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚಿಸುವತ್ತ ಸಾಗುತ್ತಿದೆ. ಕಾಂಗ್ರೆಸ್‌ 100ರ ಗಡಿ ದಾಟಬಹುದು ಎಂದು ನನಗೆ ಅನಿಸುತ್ತಿಲ್ಲ. ಅದು ಹೆಚ್ಚು ಕಡಿಮೆ 75–80 ಸ್ಥಾನಗಳಿಗೆ ಬಂದು ನಿಲ್ಲಬಹುದು. ಇದು ಈ ಚುನಾವಣೆಯ ಸಂಕ್ಷಿಪ್ತ ಚಿತ್ರಣ.

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಹೆಚ್ಚಿನದ್ದನ್ನು ಗೆಲ್ಲಲು ಬಿಜೆಪಿಯು ರಾಜಕೀಯವಾಗಿ ರಹದಾರಿ ನಿರ್ಮಿಸಿಕೊಂಡಿರುವ ಅನಿಸಿಕೆ ನನಗಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯೂ 2014ರ ಚುನಾವಣೆಗಿಂತಲೂ ಗಣನೀಯವಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಅದೇ ಹೊತ್ತಲ್ಲೇ ಹಿಂದಿ ಕೇಂದ್ರ ಪ್ರದೇಶಗಳಲ್ಲಿ ಬಿಜೆಪಿಯ ಲೆಕ್ಕ ಕಡಿಮೆಯಾಗುವ ಸಾಧ್ಯತೆಗಳೂ ಇದೆ. 2014ರ ಹೊತ್ತಲ್ಲಿ ಬಿಜೆಪಿಯು ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿಯಲ್ಲಿ ಉತ್ತುಂಗದಲ್ಲಿತ್ತು. ಹಾಗಾಗಿಯೇ ಹೆಚ್ಚಿನ ಸ್ಥಾನಗಳನ್ನು ರಾಜ್ಯಗಳಲ್ಲಿ ಗೆದ್ದಿತ್ತು. ಆದರೆ, ಈ ಬಾರಿ ಅಲ್ಲಿ ಬಿಜೆಪಿಗೆ ನಷ್ಟವಾಗಲಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ. ತ್ರಿಪುರದಲ್ಲೂ ಬಿಜೆಪಿಗೆ ಅನುಕೂಲಕಾರಿ ವಾತಾವರಣವಿದೆ.

ADVERTISEMENT

ಮೋದಿ ಅವರ ಪ್ರಚಾರದಲ್ಲಿ ಬದಲಾವಣೆಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ತೀರಇತ್ತೀಚಿಗೆ... ಅಂದರೆ 6ನೇ ಹಂತದ ಮತದಾನದ ವೇಳೆ ಮೋದಿ ತಮ್ಮ ಜಾತಿ ಮತ್ತು ಆರ್ಥಿಕ ಸ್ಥಿತಿಯ ವಿಚಾರಗಳನ್ನು ಮುನ್ನೆಲೆಗೆ ತಂದರು. ‘ನಾನು ಹಿಂದುಳಿದ ಜಾತಿಗೆ ಸೇರಿದವನು. ಎಲ್ಲ ವರ್ಗದ ಜನರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ,’ ಎಂದು ಎಂದು ಅವರು ಹೇಳಿದರು. ಹಿಂದುಳಿದ ಜಾತಿ ಮತ್ತು ವರ್ಗದ ವಿಚಾರವನ್ನು ಚರ್ಚೆಗೆ ತರುವ ಮೂಲಕ ಅವರು, ಅದೇ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಚಲನ ಸೃಷ್ಟಿ ಮಾಡಿದರು. ಆ ಮೂಲಕ ಮತಗಳ ಧ್ರುವೀಕರಣಕ್ಕೆ ಕೈ ಹಾಕಿದರು. ಕೇವಲ ಕಾಂಗ್ರೆಸ್‌ ಅನ್ನು ಬೈಯುತ್ತಾ ಓಡಾಡುವುದು ಮತ್ತು ಕೇವಲ ಒಂದೇ ವಿಚಾರವನ್ನು ಹಿಡಿದು ಎಳೆದಾಡುವುದು ಜನರಲ್ಲಿ ಬೇಸರ ಹುಟ್ಟಿಸಬಹುದು ಎಂಬುದನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಂತಿದ್ದ ಮೋದಿ, ಚರ್ಚಾ ವಿಷಯಗಳನ್ನು ನಿರಂತರವಾಗಿ ಬದಲಿಸುತ್ತಾ ಹೋದರು.

ಒಂದು ಹಂತದಲ್ಲಿ ಮೋದಿ ಅವರು ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾರಂಭಿಸಿದರು. ಭ್ರಷ್ಟಾಚಾರ, ಬೋಫೋರ್ಸ್‌, ರಾಜೀವ್‌ ಗಾಂಧಿಯ ವಿಚಾರಗಳನ್ನು ಹಿಡಿದು ಜಗ್ಗಾಡಿದರು. ‘ರಾಜೀವ್‌ ಗಾಂಧಿ ಭ್ರಷ್ಟಚಾರಿಯಾಗಿಯೇ ಪ್ರಾಣ ಬಿಟ್ಟರು,’ ಎಂದು ಮೊದಲಿಗೆ ಹೇಳಿದ ಮೋದಿ, ನಂತರ ‘ರಾಜೀವ್‌ ಗಾಂಧಿ ಅವರು ನೌಕಾಪಡೆಯನ್ನು ಪಿಕ್‌ನಿಕ್‌ಗೆ ತೆರಳಲು ಬಳಸಿಕೊಂಡರು,’ ಎಂದು ದಾಳಿ ನಡೆಸಿದರು.

ಒಂದೊಂದು ಹಂತದ ಮತದಾನಕ್ಕೂ ಚರ್ಚೆಯ ವಿಚಾರಗಳನ್ನು ಬದಲಿಸುತ್ತಾ ಹೋದ ಮೋದಿ ಅವರ ಚಾಣಾಕ್ಷತೆ ಬಗ್ಗೆ ನಾನಿಲ್ಲಿ ಹೇಳ ಹೊರಟಿದ್ದೇನೆ. ಒಂದು ಹಂತದಲ್ಲಿ ಅವರು ಜಾತಿ, ವರ್ಗಗಳನ್ನು ತಂದರು, ನಂತರದಲ್ಲಿ ರಾಜೀವ್‌ ಗಾಂಧಿ ಅವರ ವಿಚಾರ ಎಳೆದು ತಂದು ಗಾಂಧಿ ಕುಟುಂಬವನ್ನು ಭ್ರಷ್ಟರ ಕುಟುಂಬ ಎಂದರು. ಅದಕ್ಕೂ ಹಿಂದೆ, ಪುಲ್ವಾಮಾ, ಬಾಲಾಕೋಟ್‌ ದಾಳಿ, ದೇಶದ ಭದ್ರತೆಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಾ ಹೋದರು. ಕೆಲವೊಂದು ಕಡೆಗಳಲ್ಲಿ ಅವರು ಪ್ರಾದೇಶಿಕ ಪಕ್ಷಗಳು ಮತ್ತು ಪ್ರಾದೇಶಿಕ ನಾಯಕರ ಮೇಲೆ ಮಾತ್ರ ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ಮಹಾಘಟಬಂಧವನ್ನು ಮಹಾಮಿಲಾವಟ್‌ (ಮಹಾ ಕಲಬೆರಕೆ) ಎಂದು ಜರೆದರು. ಅಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಗಳ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಾ ಹೋದರು. ಕೇವಲ 30 ರಿಂದ 40 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದವರೆಲ್ಲ ಪ್ರಧಾನಿ ಹುದ್ದೆಯ ಕನಸುಕಾಣುತ್ತಿದ್ದಾರೆ ಎಂದೆಲ್ಲಾ ಅವರು ಗೇಲಿ ಮಾಡಿದ್ದರು.

ಚುನಾವಣೆ ವೇಳೆ ಮೋದಿ ಬಳಸಿದ ವಿವಿಧ ಅಸ್ತ್ರಗಳು ಪ್ರಾದೇಶಿಕ ಪಕ್ಷಗಳನ್ನು ಅಪಹಾಸ್ಯ ಮಾಡುವಂತಿದ್ದವು. ಪ್ರಾದೇಶಿಕ ಪಕ್ಷಗಳ ನಾಯಕರದ್ದು ವಿದೂಷಕ ಸಮೂಹ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡಲು ಪ್ರಧಾನಿಯವರು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಇದರ ಜತೆಗೆ ದೇಶದ ಭದ್ರತೆ ಎಂಬುದು ಎಷ್ಟು ಮುಖ್ಯ ಎಂಬುದನ್ನು ಪದೇ ಪದೆ ನೆನಪಿಸಲು ಪ್ರಯತ್ನಿಸುತ್ತಿದ್ದರು. ಸ್ಥಳೀಯ ಅಪರಾಧ ಕೃತ್ಯಗಳನ್ನೇ ನಿಯಂತ್ರಿಸಲು ಪ್ರಾದೇಶಿಕ ಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ದೇಶದಕ್ಕೆ ಮಾರಕವಾಗಿರುವ ಭಯೋತ್ಪಾದನೆಯನ್ನು ಇವರು ನಿಯಂತ್ರಿಸಬಲ್ಲರೇ ಎಂಬ ಪ್ರಶ್ನೆಗಳನ್ನು ಮೋದಿ ಜನರ ಮುಂದಿಡುತ್ತಿದ್ದರು. ಚುನಾವಣೆ ಪ್ರಚಾರವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ಸ್ವತಃ ಜನರೇ ಎದ್ದು ಹೋಗಿ ಪಾಕಿಸ್ತಾನದ ಮೇಲೆ ಬಾಂಬ್‌ ಹಾಕಿ ಬಂದಂಥ ಅನುಭವ ಮತ್ತು ಭಾವನೆಗಳನ್ನು ಜನರಲ್ಲಿ ಬಿತ್ತಿದ್ದರು. ರಾಷ್ಟ್ರೀಯವಾದದ ಚರ್ಚೆ, ರಾಷ್ಟ್ರದ ಭದ್ರತೆ ಕುರಿತ ವಿಷಯಗಳು ಪ್ರತಿಬಾರಿಯೂ ಮೋದಿ ಮಾತಿನಲ್ಲಿ ಅನುರಣಿಸುತ್ತಿದ್ದವು. ಇದೆಲ್ಲವೂ ಸವಕಲಾದ ನಂತರ ಅವರು ಜಾತಿ ಮತ್ತು ವರ್ಗದ ವಿಚಾರಗಳನ್ನು ಚರ್ಚೆಗೆತ್ತಿಕೊಂಡರು. ಚುನಾವಣೆ ಪ್ರಚಾರದ ವೇಳೆ ಅವರು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡುತ್ತಿದ್ದರು, ಉತ್ಸಾಹ ತುಂಬುತ್ತಿದ್ದರು. ಅದೂ ಹೊಸತನದಿಂದ ಕೂಡಿರುತ್ತಿತ್ತು. ಅಂಥ ಪ್ರಚೋದನೆಗಳನ್ನು ಅವರು ಅತ್ಯಂತ ಎಚ್ಚರಿಕೆಯಿಂದ ತಯಾರಿಸುತ್ತಿದ್ದರು.

ಈಗ ಭ್ರಷ್ಟಾಚಾರದ ವಿಚಾರವನ್ನೇ ತೆಗೆದುಕೊಳ್ಳಿ. ಮೋದಿ ಆರೋಪಗಳಿಗೆ ತಿರುಗೇಟು ನೀಡಲು ವಿರೋಧ ಪಕ್ಷಗಳ ಬಳಿ ಇದ್ದ ಸರಕು ಅತ್ಯಲ್ಪ. ಪ್ರಾದೇಶಿಕ ಪಕ್ಷಗಳು ಜನರ ನಿರೀಕ್ಷೆಗಳ ಮಟ್ಟಕ್ಕೆ ತಲುಪಲಾರವು ಎಂಬುದನ್ನು ಮೋದಿ ಚೆನ್ನಾಗಿ ತೋರಿಸಿಕೊಟ್ಟಿದ್ದರು. ಅಷ್ಟಕ್ಕೂ ಪ್ರಾದೇಶಿಕ ಪಕ್ಷಗಳು ಸ್ಪರ್ಧೆ ಮಾಡಿದ್ದದ್ದು ಸೀಮಿತ ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿಗೆ ಉತ್ತರವೇ ಕೊಡಲಾಗದ ಪರಿಸ್ಥಿತಿ ಇದ್ದದ್ದು ನಿರುದ್ಯೋಗ ಮತ್ತು ಗ್ರಾಮೀಣ ಭಾಗದ ಸಮಸ್ಯೆಗಳ ವಿಚಾರದಲ್ಲಿ. ಇನ್ನು ಆಡಳಿತದ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಆದರೆ, ಈ ವಿಚಾರದಲ್ಲಿ ತಿರುಗೇಟು ನೀಡಲು ಆಡಳಿತ ಪಕ್ಷದ ನಾಯಕರ ಬಳಿಯೂ ಸರಕಿರಲಿಲ್ಲ. ಇನ್ನೊಂದು ಕಡೆ, ಬಾಲಾಕೋಟ್‌ ದಾಳಿ ವಿಚಾರದಲ್ಲಿ ಕಾಂಗ್ರೆಸ್‌ ಬರ ಬರುತ್ತಾ ಸಾಕ್ಷಿ ಕೇಳುವುದನ್ನು ನಿಲ್ಲಿಸಿಯೇ ಬಿಟ್ಟಿತು. ದೇಶದ ಭದ್ರತೆ ಮತ್ತು ಸುಭದ್ರ ಸರ್ಕಾರದ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌ಗಾಗಿಲಿ, ಪ್ರಾದೇಶಿಕ ಪಕ್ಷಗಳಿಗಾಗಲಿ ಸಾಧ್ಯವೇ ಆಗಲಿಲ್ಲ. ಇನ್ನೊಂದು ಕಡೆ ದೇಶದಲ್ಲಿ ನಿತ್ಯವೂ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್‌ ಸಂಪೂರ್ಣ ಸೋತು ಹೋಯಿತು. ಆದರೆ, ಆ ವಿಚಾರ ಚರ್ಚೆಗೆ ಬಂದರೂ ಕಾಂಗ್ರೆಸ್‌ಗೆ ಅದರಿಂದ ಲಾಭವಾಗುವ ಸನ್ನಿವೇಶಗಳಿರಲಿಲ್ಲ. ಏಕೆಂದರೆ, ಈ ವಿಷಯದಲ್ಲಿ ಕಾಂಗ್ರೆಸ್‌ಗಿಂತಲೂ ಮೋದಿ ಬಳಿ ಪರಿಹಾರವಿದೆ ಎಂದು ಜನ ನಂಬಿದ್ದರು. ಜನರೊಂದಿಗೆ ಸಂಪರ್ಕ ಸಾಧಿಸುವ ವಿಚಾರದಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿ ಹೆಚ್ಚು ಮುಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.