ADVERTISEMENT

ರಾಹುಲ್ ಗಾಂಧಿ ಮದುವೆ ಆಗಲ್ಲ, ನರೇಂದ್ರ ಮೋದಿ ಸೋಲಿಸಲಾಗಲ್ಲ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 15:55 IST
Last Updated 25 ಜೂನ್ 2023, 15:55 IST
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿದರು
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಚಿಕ್ಕೋಡಿ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು 17 ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುವ ಜೊತೆಗೆ ರಾಹುಲ್ ಗಾಂಧಿ ಮದುವೆ ಮಾಡುವ ಕುರಿತು ಮಾತ್ರ ಮಾತುಕತೆ ನಡೆಸಿವೆ. ಆದರೆ, ರಾಹುಲ್ ಗಾಂಧಿ ಮದುವೆಯೂ ಆಗುವುದಿಲ್ಲ. ನರೇಂದ್ರ ಮೋದಿ ಅವರನ್ನು ಸೋಲಿಸಲೂ ಆಗದು’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ತಾಲ್ಲೂಕಿನ ಯಕ್ಸಂಬಾದ ಬೀರೇಶ್ವರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿನ ಸಭೆಯಲ್ಲಿ ತಾವು ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಅಭಿಪ್ರಾಯಗಳನ್ನು ಹಂಚಿಕೊಂಡು ಕುರಿತು ಪ್ರಸ್ತಾಪಿಸಿದ ಬೊಮ್ಮಾಯಿ, ‘ನಮ್ಮದು ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ಪಕ್ಷ. ನಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ನನ್ನದು, ಪಕ್ಷದ ಮುಖಂಡರದ್ದು ಮತ್ತು ಲಕ್ಷಾಂತರ ಕಾರ್ಯಕರ್ತರದ್ದು ಬಿಜೆಪಿ ಡಿಎನ್ಎ’ ಎಂದರು.

ADVERTISEMENT

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಜನವರಿಯಲ್ಲಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ. ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಸೇರಿದಂತೆ ವಿವಿಧ ಮಹತ್ವದ ಕಾಯ್ದೆಗಳನ್ನು ರೂಪಿಸಿ ಮುಂಬರುವ ಲೋಕಸಭೆ ಚುನಾವಣೆಯನ್ನು ಬಿಜೆಪಿ ಎದುರಿಸಲಿದೆ’ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಜಿಗಜಿಣಗಿ, ಶಾಸಕರಾದ ಬಾಲಚಮದ್ರ ಜಾರಕಿಹೊಳಿ, ಡಿ.ಎಂ.ಐಹೊಳೆ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಚಲುವಾದಿ ನಾರಾಯಣಸ್ವಾಮಿ, ಅಭಯ ಪಾಟೀಲ, ಮಾಜಿ ಶಾಸಕರಾದ ಮುರುಗೇಶ ನಿರಾಣಿ, ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ ನಡಹಳ್ಳಿ, ಪಿ.ರಾಜೀವ ಮಾತನಾಡಿದರು.


ಸಂಸದೆ ಮಂಗಲಾ ಅಂಗಡಿ, ಮಹೇಶ ಕುಮಠಳ್ಳಿ, ಬಸವರಾಜ ಹುಂದ್ರಿ, ಮಹೇಶ ಭಾತೆ, ಉಜ್ವಲಾ ಬಡವನಾಚೆ, ದುಂಡಪ್ಪ ಬೆಂಡವಾಡೆ, ರಮೇಶ ಕೇತಗೌಡರ, ಜಯಾನಂದ ಜಾಧವ, ಸತೀಶ ಅಪ್ಪಾಜಿಗೋಳ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲೆ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.