ADVERTISEMENT

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 7:34 IST
Last Updated 29 ಫೆಬ್ರುವರಿ 2024, 7:34 IST
<div class="paragraphs"><p>ಶ್ರೀರಾಮುಲು</p></div>

ಶ್ರೀರಾಮುಲು

   

ಬಳ್ಳಾರಿ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣವನ್ನು ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಭಯೋತ್ಪಾದಕರ ಪರವಾಗಿ ನಿಂತಿದೆ. ವಿಧಾನಸೌಧ ದೇಗುಲವಿದ್ದಂತೆ. ಇಂಥ ದೇಗುಲದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಕಿಡಿಗೇಡಿ ಕೃತ್ಯ. ವಿಧಾನಸೌಧದಲ್ಲಿ ಘೋಷಣೆ ಕೂಗಿದವರು ಮುಂದೊಂದು ದಿನ ಅದೇ ವಿಧಾನಸೌಧದಲ್ಲಿ ಬಾಂಬ್ ಇಡಲಾರರೇ ಎಂದು ಪ್ರಶ್ನೆ ಮಾಡಿದ್ದಾರೆ.

ADVERTISEMENT

'ಬಳ್ಳಾರಿಯವರಾದ ನಾಸೀರ್ ಹುಸೇನ್ ಎರಡನೇ ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಖುಷಿಯಿದೆ. ಆದರೆ, ಅವರು ಮನಸ್ಸು ಮಾಡಿದ್ದರೆ ಘೋಷಣೆ ಕೂಗಿದವರನ್ನು ಜೈಲಿಗೆ ಕಳುಹಿಸಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳು ಹೆಚ್ಚುತ್ತಿವೆ' ಎಂದರು.

'ಕಾಂಗ್ರೆಸ್ ಒಂದು ಕಡೆ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತದೆ. ಆದರೆ ಸಂವಿಧಾನಕ್ಕೆ ಅಗೌರವ ತರುವಂತೆ ನಡೆದುಕೊಳ್ಳುತ್ತಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಸ್ಪೀಕರ್ ಹುದ್ದೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಅಪಮಾನಕಾರಿಯಾಗಿ ಮಾತನಾಡಿದ್ದರು' ಎಂದು ಆಕ್ರೋಶ ಹೊರಹಾಕಿದರು.

'ಪಾಕಿಸ್ತಾನ ಜಿಂದಾಬಾದ್' ಘೋಷಣೆಗೆ ಸಂಬಂಧಿಸಿದ ವಿಡಿಯೊವನ್ನು ಸರ್ಕಾರ ಎಫ್ಎಸ್ಎಲ್ ಪರಿಶೀಲನೆಗಾಗಿ ಕಳುಹಿಸಿದೆ. ವರದಿ ಬರುವ ಮೊದಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ, ಪ್ರಿಯಾಂಕಾ ಖರ್ಗೆ ಆರೋಪಿಗಳಿಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

'ಎಫ್ಎಸ್ಎಲ್ ವರದಿಯೂ ಸರ್ಕಾರದ ಪರವಾಗಿಯೇ ಬರುವ ಆತಂಕವಿದೆ. ಸರ್ಕಾರ ನಡೆಸುವ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಬೇಕು' ಎಂದು ಆಗ್ರಹಿಸಿದರು.

ಸರ್ಕಾರದ ಆರನೇ ಗ್ಯಾರೆಂಟಿ: 'ದೇಶದ್ರೋಹಿಗಳಿಗೆ ರಕ್ಷಣೆ ನೀಡುವುದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ. ಇಲ್ಲಿ ಹೀಗೆ ಘೋಷಣೆ ಕೂಗುವವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಲಿ. ಅಂಥವರ ವಿಮಾನ ಪ್ರಯಾಣದ ಖರ್ಚನ್ನು ನಾವೇ ಕೊಡುತ್ತೇವೆ' ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.