ADVERTISEMENT

ಹಿಂದೂಗಳನ್ನು ಹೀಯಾಳಿಸೋದೆ ಇವರ ಚಾಳಿ: ಸಿದ್ದರಾಮಯ್ಯ ವಿರುದ್ಧ ಅಶೋಕ ಗರಂ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:59 IST
Last Updated 18 ಫೆಬ್ರುವರಿ 2021, 8:59 IST
 ಕಂದಾಯ ಸಚಿವ ಆರ್. ಅಶೋಕ
ಕಂದಾಯ ಸಚಿವ ಆರ್. ಅಶೋಕ   

ಬೆಂಗಳೂರು: 'ಸಿದ್ದರಾಮಯ್ಯ ವಕೀಲ ಆಗಿದ್ದವರು. ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾದ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಇವರಿಗೆ ನಂಬಿಕೆ ಇಲ್ಲವೇ? ಇಷ್ಟ ಇದ್ದರೆ ದೇಣಿಗೆ ಕೊಡಲಿ‌. ಇಲ್ಲದೇ ಇದ್ದರೆ ಸುಮ್ಮನಿರಿ. ಕೊಡಬಾರದು ಎಂದು ಯಾಕೆ ಹೇಳಬೇಕು' ಎಂದು ಕಂದಾಯ ಸಚಿವ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 'ಮಸೀದಿ,‌ ಚರ್ಚ್ ಕಟ್ಟುವ ಬಗ್ಗೆ ಏನಾದರೂ ಮಾತನ್ನಾಡಿದ್ದಾರಾ. ಹಿಂದೂಗಳನ್ನು ಹೀಯಾಳಿಸೋದೆ ಇವರ ಚಾಳಿ' ಎಂದರು.

ಬೆದರಿಕೆ ಹಾಕುತ್ತಾರೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ರಾಮಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ. ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಧಮಕಿ ಹಾಕಲು ಆಗುತ್ತಾ. ಇವರೇ ಇನ್ನೊಬ್ಬರಿಗೆ ಧಮಕಿ ಹಾಕುತ್ತಾರೆ. ಶಾಸಕರಿಗೆ ಇವರೇ ಧಮಕಿ ಹಾಕುತ್ತಾರೆ' ಎಂದರು.

ADVERTISEMENT

ರಾಮನ ಲೆಕ್ಕದಲ್ಲಿ ಅವ್ಯವಹಾರ ಆರೋಪದ ಬಗ್ಗೆ, 'ಮನೆ ಲೆಕ್ಕ ಕೇಳಲು ಇವರು ಯಾರು? ಇವರಂತೂ ನಯಾ ಪೈಸೆ ಕೊಟ್ಟಿಲ್ಲ. ಕೊಡುವವರನ್ನು ಬೇಡ ಅನ್ನೋಕೆ ಇವರು ಯಾರು. ಇವರದೇ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಇವರ ಮಾತನ್ನು ಅವರದೇ ಪಕ್ಷದ ಶಾಸಕರು ಕೇಳುವುದಿಲ್ಲ. ಈಗಾಗಲೇ ಆರ್‌ಟಿಜಿಎಸ್, ಚೆಕ್, ಆನ್ ಲೈನ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಇದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ' ಎಂದರು.

ಅಯೋಧ್ಯೆಗೆ ತೆರಳಿ ದೇಣಿಗೆ ನೀಡಲು ಶಿವಲಿಂಗೇಗೌಡ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ. 'ಅದನ್ನಾದರೂ ಮಾಡಲಿ ಬಿಡಿ. ಅವರೇ ಅಯೋಧ್ಯೆಗೆ ಹೋಗಿ ಕೊಡುತ್ತಾರೆಂದರೆ ಸಂತೋಷವಲ್ಲವೇ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.