ರಾಮನಗರ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕಗ್ಗಲಿಪುರ ಠಾಣೆ ಪೊಲೀಸರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಳಿ ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಜಾತಿನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಲಯದಿಂದ ಅವರು ಜಾಮೀನು ಪಡೆದಿದ್ದರು. ಜಾಮೀನು ಪ್ರಕ್ರಿಯೆ ಮುಗಿಸಿ ಹೊರಬರುವ ಅವರನ್ನು ಬಂಧಿಸಲು ಕಗ್ಗಲಿಪುರ ಪೊಲೀಸರ ತಂಡ ಜೈಲಿನ ಬಳಿಯೇ ಬೀಡು ಬಿಟ್ಟಿತ್ತು. ಆದರೆ, ರಾತ್ರಿಯಾದರೂ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರಿಂದ ಬಿಡುಗಡೆ ವಿಳಂಬವಾಗಿತ್ತು. ಇದರಿಂದಾಗಿ ಬರಿಗೈಲಿ ವಾಪಸಾಗಿದ್ದರು.
ಶುಕ್ರವಾರ ಬೆಳಿಗ್ಗೆಯೇ ಜೈಲಿಗೆ ತೆರಳಿದ್ದ ತಂಡ, ಅವರು ಹೊರಬರುವುದನ್ನೇ ಕಾಯುತ್ತಿದ್ದರು. ಬಿಡುಗಡೆ ಪ್ರಕ್ರಿಯೆ ಮುಗಿಸಿ 8.45ರ ಸುಮಾರಿಗೆ ಹೊರಬಂದ ಅವರನ್ನು ತನಿಖಾಧಿಕಾರಿ ಡಿವೈಎಸ್‌ಪಿ ದಿನಕರ ಶೆಟ್ಟಿ ನೇತೃತ್ವದ ತಂಡ ಬಂಧಿಸಿತು.
ವೈದ್ಯಕೀಯ ಪರೀಕ್ಷೆ: ಹಾರೋಹಳ್ಳಿ ಕನಕಪುರ ರಸ್ತೆಯಲ್ಲಿರುವ ದಯಾನಂದ ಸಾಗರ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಅವರನ್ನು ಬೆಳಿಗ್ಗೆ 11ಕ್ಕೆ ಪೊಲೀಸರು ಕರೆ ತಂದರು. ತಜ್ಞ ವೈದ್ಯರ ತಂಡ ಒಂದೂವರೆ ತಾಸು ವೈದ್ಯಕೀಯ ಪರೀಕ್ಷೆ ನಡೆಸಿತು. ಈ ವೇಳೆ, ವೀರ್ಯ ಕೊಡಲು ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ.
ಮುನಿರತ್ನ ಬರುವ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹೊರಭಾಗದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್‌ಗೆ ಹಾಜರು: ಪ್ರಕರಣದ ಮುಖ್ಯ ಆರೋಪಿಯಾಗಿರುವ ಅವರನ್ನು ತನಿಖಾ ತಂಡ ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಆರೋಪಿಯನ್ನು ಮತ್ತಷ್ಟು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸಿದ್ಧತೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜರಾಜೇಶ್ವರಿ ನಗರದಲ್ಲಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡು ಬಿಜೆಪಿಯಲ್ಲೂ ಸಕ್ರಿಯವಾಗಿರುವ 40 ವರ್ಷದ ಮಹಿಳೆ, ಸೆ.18ರಂದು ರಾತ್ರಿ, ಶಾಸಕ ಮುನಿರತ್ನ ಸೇರಿ ಏಳು ಮಂದಿ ವಿರುದ್ಧ ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಆರೋಪದ ಮೇಲೆ ಕಗ್ಗಲಿಪುರ ಠಾಣೆಗೆ ರಾತ್ರಿ ದೂರು ಕೊಟ್ಟಿದ್ದರು. ಅವರೊಂದಿಗೆ ಮತ್ತೊಬ್ಬ ಮಹಿಳೆ ಕೂಡ ಠಾಣೆಗೆ ಹಾಜರಾಗಿ, ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆ ಮೇರೆಗೆ ಪೊಲೀಸರು ಇಬ್ಬರನ್ನು ಸಂತ್ರಸ್ತೆಯರನ್ನಾಗಿ ಪರಿಗಣಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
12 ಕಲಂಗಳಡಿ ಪ್ರಕರಣ: ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ 354–ಎ (ಲೈಂಗಿಕ ದೌರ್ಜನ್ಯ), 354–ಸಿ (ಆಕ್ಷೇಪಾರ್ಹ ಚಿತ್ರ ತೆಗೆಯುವುದು), 376–2 (ಮಹಿಳೆ ಮೇಲೆ ಬಲವಂತದಿಂದ ನಿರಂತರವಾಗಿ ಅತ್ಯಾಚಾರ), 308 (ಹತ್ಯೆಗೆ ಯತ್ನ), 406 (ನಂಬಿಕೆ ದ್ರೋಹ), 384 (ಸುಲಿಗೆ), 120–ಬಿ (ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು), 506 (ಜೀವ ಬೆದರಿಕೆ), 149 (ಅಕ್ರಮವಾಗಿ ಗುಂಪು ಸೇರುವುದು), ಐ.ಟಿ ಕಾಯ್ದೆ 66 (ಕಂಪ್ಯೂಟರ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನ ಬಳಸಿಕೊಂಡು ಯಾವುದೇ ವ್ಯಕ್ತಿಗೆ ಆಕ್ಷೇಪಾರ್ಹ ಮಾಹಿತಿ ಕಳುಹಿಸುವುದು), 66–ಇ (ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಚಿತ್ರವನ್ನು ಒಪ್ಪಿಗೆ ಇಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ರವಾನಿಸಿ ವ್ಯಕ್ತಿಯ ಗೋಪ್ಯತೆ ಉಲ್ಲಂಘಿಸುವುದು) ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವ ಒತ್ತಡವಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ
ಮುನಿರತ್ನ ಮಾಡಿರುವ ಕೆಲಸ ಮಾನವ ಕುಲಕ್ಕೆ ಕಳಂಕ. ಅವರ ಪರವಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಆರ್.ಅಶೋಕ ಅವರು ಮಾತನಾಡುತ್ತಿರುವುದನ್ನು ನೋಡಿದರೆ ಅವರೇ ಕುಮ್ಮಕ್ಕು ಕೊಟ್ಟಿರುವಂತಿದೆಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ
ರಾಜಕೀಯ ಎದುರಾಳಿಗಳು ಹಾಗೂ ಮಾತು ಕೇಳದವರನ್ನು ಎಚ್‌ಐವಿ ಸೋಂಕಿತರ ಮೂಲಕ ಹನಿಟ್ರ್ಯಾಪ್ ಮಾಡಿಸಿರುವ ಮುನಿರತ್ನ ಸಮಾಜ ಪೀಡಕ. ಅವರ ಶಾಸಕ ಸ್ಥಾನ ಕೂಡಲೇ ರದ್ದುಪಡಿಸಬೇಕುಎಸ್. ರವಿ, ವಿಧಾನ ಪರಿಷತ್ ಸದಸ್ಯ
ವೈದ್ಯಕೀಯ ಪರೀಕ್ಷೆ ಮುಗಿಸಿ ಮುನಿರತ್ನ ಅವರನ್ನು ಮಧ್ಯಾಹ್ನ ಠಾಣೆಗೆ ಕರೆದುಕೊಂಡು ಬಂದ ತನಿಖಾ ತಂಡ ಸಂಜೆವರೆಗೆ ನಿರಂತರವಾಗಿ ವಿಚಾರಣೆ ನಡೆಸಿತು. ತನ್ನ ವಿರುದ್ಧದ ಆರೋಪ ನಿರಾಕರಿಸಿರುವ ಮುನಿರತ್ನ ‘ನಾನು ಯಾರ ಮೇಲೂ ಅತ್ಯಾಚಾರ ಎಸಗಿಲ್ಲ. ಹನಿಟ್ರ್ಯಾಪ್ ಕೂಡ ಮಾಡಿಲ್ಲ. ಆರೋಪಗಳೆಲ್ಲವೂ ಸುಳ್ಳು. ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತೆ ತನ್ನ ಮೇಲೆ ವಿವಿಧೆಡೆ ಅತ್ಯಾಚಾರ ನಡೆದಿರುವುದಾಗಿ ಆರೋಪಿಸಿದ್ದಾರೆ. ಆ ಪೈಕಿ ಕಗ್ಗಲಿಪುರ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್ ಕೂಡ ಒಂದಾಗಿದ್ದು ಬೆಂಗಳೂರಿನಲ್ಲೇ ಹೆಚ್ಚಾಗಿ ಕೃತ್ಯ ನಡೆದಿದೆ. ಹಾಗಾಗಿ ಪ್ರಕರಣವನ್ನು ಸಂಬಂಧಿಸಿದ ಸ್ಥಳದ ವ್ಯಾಪ್ತಿಯ ಠಾಣೆಗೆ ವರ್ಗಾಯಿಸುವ ಕುರಿತು ಇಲಾಖೆ ಮೇಲಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶೇಷ ತಂಡ ರಚನೆ ಮುನಿರತ್ನ ಆಣತಿಯಂತೆ ಮಹಿಳೆಯರೊಂದಿಗೆ ಹನಿಟ್ರ್ಯಾಪ್‌ಗೆ ನೆರವಾಗುತ್ತಿದ್ದ ಪ್ರಕರಣದ ಉಳಿದ ಆರು ಮಂದಿ ಆರೋಪಿಗಳಾದ ಗನ್‌ಮ್ಯಾನ್ ವಿಜಯಕುಮಾರ್ ಸುಧಾಕರ ಕಿರಣ್ ಕುಮಾರ್ ಲೋಹಿತ್ ಗೌಡ ಮಂಜುನಾಥ ಹಾಗೂ ಲೋಕಿ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ವಿಶೇಷ ತಂಡ ರಚಿಸಿದ್ದಾರೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆ ಕರೆದೊಯ್ದು ಮಹಜರು ಕೃತ್ಯ ನಡೆದ ಸ್ಥಳಗಳಿಗೆ ಗುರುವಾರ ಮತ್ತು ಶುಕ್ರವಾರ ಸಂತ್ರಸ್ತೆಯನ್ನು ಕರೆದೊಯ್ದು ತನಿಖಾ ತಂಡ ಮಹಜರು ನಡೆಸಿದೆ. ತನಿಖಾಧಿಕಾರಿ ದಿನಕರ ಶೆಟ್ಟಿ ನೇತೃತ್ವದ ತಂಡವು ಮುತ್ಯಾಲನಗರದಲ್ಲಿರುವ ಮುನಿರತ್ನ ಅವರಿಗೆ ಸೇರಿದ ಗೋದಾಮಿಗೆ ಸಂತ್ರಸ್ತೆಯೊಂದಿಗೆ ಗುರುವಾರ ರಾತ್ರಿ ಬಂದಿದೆ. ಬೀಗ ಹಾಕಿದ್ದ ಗೋದಾಮಿನ ಬಾಗಿಲು ತೆಗೆಯಲು ಸಾಧ್ಯವಾಗದಿದ್ದಾಗ ಮೆಟಲ್ ಕಟ್ಟರ್ ತಂದು ಬೀಗ ಕತ್ತರಿಸಿ ಒಳಕ್ಕೆ ಹೋಗಿ ಮಹಜರು ಮುಗಿಸಿದೆ.
ಶುಕ್ರವಾರ ಕಗ್ಗಲಿಪುರ ವ್ಯಾಪ್ತಿಯ ಗುಹಾಂತರ ರೆಸಾರ್ಟ್‌ಗೆ ಸಂತ್ರಸ್ತೆಯನ್ನು ಕರೆತಂದು ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ. ಎರಡೂ ಕಡೆ ಮಹತ್ವದ ಸಾಕ್ಷ್ಯಾಧಾರ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.