ADVERTISEMENT

ಅತ್ಯಾಚಾರ ಆರೋಪ: ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ

ನ್ಯಾಯಾಧೀಶರ ಮುಂದೆ ಮುನಿರತ್ನ ಭಾವುಕ‌ ನುಡಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 9:13 IST
Last Updated 21 ಸೆಪ್ಟೆಂಬರ್ 2024, 9:13 IST
<div class="paragraphs"><p>ಶಾಸಕ ಮುನಿರತ್ನ</p></div>

ಶಾಸಕ ಮುನಿರತ್ನ

   

ಬೆಂಗಳೂರು: ಮಹಿಳೆಯ ಮೇಲಿನ ಅತ್ಯಾಚಾರ ಆರೋಪ‌ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರದ ಶಾಸಕ‌ ಮುನಿರತ್ನ ಅವರನ್ನು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

"ಮುನಿರತ್ನ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ" ಎಂದು ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ‌ ಅನುಸಾರ ಮುನಿರತ್ನ ಅವರನ್ನು ಪೊಲೀಸರು ಶುಕ್ರವಾರ (ಸೆ.20) ಬೆಳಿಗ್ಗೆಯಷ್ಟೇ ವಶಕ್ಕೆ ಪಡೆದಿದ್ದರು.

ADVERTISEMENT

ಶನಿವಾರ ಬೆಳಿಗ್ಗೆ, "ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ"ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಶಿವಕುಮಾರ್ ಮುಂದೆ ಅವರನ್ನು ಹಾಜರುಪಡಿಸಲಾಯಿತು.

ಕೆಲಕಾಲ ಮುನಿರತ್ನ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಆರೋಪಿಯನ್ನು ಅಕ್ಟೋಬರ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ವಿಚಾರಣೆ ವೇಳೆ ಮುನಿರತ್ನ‌ ಪರ ವಕೀಲರು, "ಈ ಪ್ರಕರಣದಲ್ಲಿ ಸುದ್ದಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಅನಪೇಕ್ಷಿತವಾಗಿದೆ" ಎಂದು ಆರೋಪಿಸಿದರು.

"ಎಫ್‌ಐಆರ್ ಆಗಿದ್ದು ಗುರುವಾರ ರಾತ್ರಿ 9.30ಕ್ಕೆ ಮರುದಿನ ಬೆಳಿಗ್ಗೆಯೇ ಈ ಎಫ್ಐಆರ್ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿತ್ತು. ಎಫ್ಐಆರ್ ದಾಖಲಾಗುವ ಮುನ್ನವೇ ಮಾಧ್ಯಮಗಳಲ್ಲಿ ಎಲ್ಲವೂ ಬಿತ್ತರಗೊಂಡು ಬಿಡುತ್ತವೆ. ಪ್ರಕರಣವನ್ನು ಮಾಧ್ಯಮದವರು ತನಿಖೆ ಮಾಡುತ್ತಾರೆಯೋ ಅಥವಾ ಪೊಲೀಸರೋ ಎಂಬುದೇ ಗೊತ್ತಾಗುತ್ತಿಲ್ಲ. ಈ ಮಾಹಿತಿಯೆಲ್ಲಾ ಹೇಗೆ ಸೋರಿಕೆ ಆಗುತ್ತಿದೆ ಎಂಬ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು" ಎಂದು ನ್ಯಾಯಾಧೀಶರಿಗೆ ಮನವಿ‌ ಮಾಡಿದರು.

ಇದಕ್ಕೆ ನ್ಯಾಯಾಧೀಶ ಶಿವಕುಮಾರ್, "ಈ ಸಂಬಂಧ ನಿಮ್ಮ ದೂರು ಸಲ್ಲಿಸಿ" ಎಂದು ಸೂಚಿಸಿದರು.

ಮುನಿರತ್ನ ಅಳಲು:

ಆರೋಪಿ ಮುನಿರತ್ನ ಅವರು ಕೆಲ ಕ್ಷಣಗಳ ಕಾಲ ಭಾವುಕರಾಗಿ ನ್ಯಾಯಾಧೀಶರಿಗೆ, "ಎರಡು ನಿಮಿಷ ಮಾತಾಡುತ್ತೇನೆ ಸಾರ್" ಎಂದು ಮನವಿ ಮಾಡಿದರು.

"ದೂರು ನೀಡಿದವರು ನನ್ನ ಜೊತೆಗೇ ಇದ್ದವರು. ಈಗ ಅವರಿಂದಲೇ ದೂರು ಕೊಡಿಸಲಾಗುತ್ತಿದೆ. ಒಂದು ಕೇಸಿನಲ್ಲಿ ಜಾಮೀನು ಸಿಗುತ್ತಿದ್ದಂತೆಯೇ ಮತ್ತೊಂದು ದೂರು ದಾಖಲಿಸಿಕೊಂಡು ಅರೆಸ್ಟ್ ಮಾಡಿಸಿದ್ದಾರೆ. ಬೇಕಂತಲೇ ರಾಜಕೀಯ ದುರುದ್ದೇಶದಿಂದ ಕೇಸ್ ಕೇಸುಗಳ ಮೇಲೆ ಕೇಸು ಮಾಡಿಸಿ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಶಾಸಕನಾಗಿರುವ ಕಾರಣದಿಂದಲೇ ಈ ರೀತಿ ಕೇಸುಗಳನ್ನು ಹಾಕಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ದೂರು ಕೊಡಿಸಲಾಗುತ್ತಿದೆ. ಈ ದೂರನ್ನು ಯಾವಾಗ ಬೇಕಾದರೂ ನೀಡಬಹುದಿತ್ತು. ನಾನು ನಾಲ್ಕು ಬಾರಿ ಶಾಸಕನಾಗಿರುವವನು. ಸಚಿವನಾಗಿದ್ದವನು. ನನಗೆ ನೀಡಲಾಗುತ್ತಿರುವ ಈ ರೀತಿಯ ಕಿರುಕುಳದಿಂದ ಬೇಸತ್ತಿದ್ದೇನೆ. ಬೇಕಾದರೆ ಶಾಸಕ ಸ್ಥಾನಕ್ಕೆ‌ ರಾಜಿನಾಮೆ ನೀಡಲೂ ಸಿದ್ಧವಿದ್ದೇನೆ" ಎಂದರು.

ಇದಕ್ಕೆ ನ್ಯಾಯಾಧೀಶರು "ಎಲ್ಲಿ ಕೊಡಬೇಕೊ ಅಲ್ಲಿ ಕೊಡಿ" ಎಂದು ಪ್ರತಿಕ್ರಿಯಿಸಿ, ಮುನಿರತ್ನ ಅವರ ವೈದ್ಯಕೀಯ ಪರೀಕ್ಷೆ ವರದಿಯನ್ನು ಪರಿಶೀಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ‌ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.