ADVERTISEMENT

ಲೈಂಗಿಕ ಸಿ.ಡಿ ಪ್ರಕರಣ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನಿರ್ದೋಷಿ?

ಬಿ ರಿಪೋರ್ಟ್ ಸಲ್ಲಿಸಿದ ಎಸ್‌ಐಟಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:45 IST
Last Updated 4 ಫೆಬ್ರುವರಿ 2022, 19:45 IST
ರಮೇಶ್‌ ಜಾರಕಿಹೋಳಿ
ರಮೇಶ್‌ ಜಾರಕಿಹೋಳಿ   

ಬೆಂಗಳೂರು: ಸಿ.ಡಿ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ’ಮಾಜಿ ಸಚಿವ ರಮೇಶ ಜಾರಕಿಹೊಳಿ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಅವರು ನಿರ್ದೋಷಿ‘ ಎಂಬುದಾಗಿ ಅಭಿ‍ಪ್ರಾಯಪಟ್ಟು, ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಿದೆ.

‘ಕೆಲಸದ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿಯೊಬ್ಬರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖಾಧಿಕಾರಿಯೂ ಆದ ಎಸಿಪಿ ಎಂ.ಸಿ. ಕವಿತಾ, ಬೆಂಗಳೂರಿನ ಒಂದನೇ ಎಸಿಎಂ
ಎಂ ನ್ಯಾಯಾಲಯಕ್ಕೆ 300 ಪುಟಗಳ ಅಂತಿಮ ವರದಿಯನ್ನು ಶುಕ್ರವಾರ ಸಲ್ಲಿಸಿದ್ದಾರೆ. ‘ಯುವತಿ ನೀಡಿದ್ದ ದೂರಿನಲ್ಲಿರುವ ಸಂಗತಿಗಳನ್ನು ಕಾನೂನಿನಡಿ ಪರಿಶೀಲಿಸಲಾಗಿದೆ. ದೂರುದಾರರ ಜೊತೆ ಒಡನಾಟವಿಟ್ಟುಕೊಂಡಿದ್ದವರು, ವೈದ್ಯರು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಹಲವರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ದೂರಿನಲ್ಲಿ ಉಲ್ಲೇಖಿಸಿದ್ದ ಬಹುತೇಕ ಆರೋಪಗಳಿಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ’ ಎಂಬುದನ್ನು ಬಿ ರಿಪೋರ್ಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಎಸ್‌ಐಟಿ ಮೂಲಗಳು ಹೇಳಿವೆ.

‘ಸಮ್ಮತಿಯಿಂದ ನಡೆದ ಕೃತ್ಯ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದು, ಇದಕ್ಕೆ ಹೋಲಿಕೆಯಾಗುವಂತೆಯೇ ಯುವತಿ ಹೇಳಿಕೆ ನೀಡಿದ್ದಾರೆ’ ಎಂಬ ಮಾಹಿತಿಯೂ ವರದಿಯಲ್ಲಿದೆ. ಅಂತಿಮ ವರದಿಯಲ್ಲಿ ರಮೇಶ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ ಎಂದೇ ಹೇಳಲಾಗಿದೆ.

ADVERTISEMENT

ಮಾಹಿತಿ ನಿರಾಕರಣೆ: ಅಂತಿಮ ವರದಿಯ ಮುಖ್ಯಾಂಶಗಳನ್ನುಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್‌ ನಿರಾಕರಿಸಿದರು. ’ಈ ಹಂತದಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಕೋರ್ಟ್ ಅಧಿಕಾರಿಗಳಿಂದಲೇ ಪಡೆಯಿರಿ’ ಎಂದು ಅವರು ಪ್ರತಿಕ್ರಿಯಿಸಿದರು.

ಕೋರ್ಟ್‌ ಅಧಿಕಾರಿಗಳನ್ನು ಈ ಕುರಿತು ಸಂಪರ್ಕಿಸಿದಾಗ, ’ಪ್ರಕರಣದ ಸಂತ್ರಸ್ತೆಗೆ ನೋಟಿಸ್ ಜಾರಿಯಾದ ಬಳಿಕ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಉತ್ತರಿಸಿದರು.

‘ಬಿ’ ರಿಪೋರ್ಟ್‌?: ಇಂತಹ ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಸಂತ್ರಸ್ತೆಗೆ ನೋಟಿಸ್ ಜಾರಿ ಮಾಡುವ ಸೂಚನೆಗಳಿವೆ ಎಂದಾದರೆ ಅದು ಪಕ್ಕಾ ’ಬಿ‘ ರಿಪೋರ್ಟ್‌ ಆಗಿರುತ್ತದೆ ಎಂಬುದು ಕಾನೂನು ತಜ್ಞರ ಅಭಿಮತ.

ಹಿರಿಯ ಕ್ರಿಮಿನಲ್ ವಕೀಲ ಸಿ.ಎಚ್‌.ಹನುಮಂತರಾಯ ಅವರ ಪ್ರಕಾರ ಇಂತಹ ಸನ್ನಿವೇಶದಲ್ಲಿ, ’ಪೊಲೀಸರು ನಿಮ್ಮ ಫಿರ್ಯಾದು ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿ ವಿರುದ್ಧ ದೋಷಾರೋಪ ಹೊರಿಸುವ ಕಾರಣ ಕಂಡು ಬಂದಿಲ್ಲ. ’ಬಿ’ ಅಂತಿಮ ವರದಿ ಹಾಕಿದ್ದಾರೆ. ಈ ವರದಿಯನ್ನು ಪ್ರಶ್ನಿಸುವುದಕ್ಕೆ ನಿಮಗೆ ಹಕ್ಕಿದೆ. ನೀವು ಪ್ರಶ್ನಿಸುವುದಿದ್ದರೆ ಇಂತಿಷ್ಟು ದಿನಗಳ ಒಳಗಾಗಿ ಕೋರ್ಟ್‌ ಮುಂದೆ ಪ್ರಶ್ನಿಸಲು ಅವಕಾಶ ಇದೆ ಎಂದು ಮ್ಯಾಜಿಸ್ಟ್ರೇಟ್‌ ನೋಟಿಸ್ ಹೊರಡಿಸುತ್ತಾರೆ’ ಎನ್ನುತ್ತಾರೆ.

‘ಬಿ’ ಅಂತಿಮ ವರದಿ ಎಂದರೇನು?

ತನಿಖೆ ಕಾಲದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಸಾಕಾಗುವಷ್ಟು ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ ಎಂಬುದುಬಿರಿಪೋರ್ಟ್‌.

ಬಿ.ರಿಪೋರ್ಟ್‌ ಅನ್ನು ಪ್ರಶ್ನಿಸಿ ಫಿರ್ಯಾದುದಾರರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿಪ್ರೊಟೆಸ್ಟ್‌ ಪಿಟಿಷನ್‌ ಫೈಲ್‌ ಮಾಡುಬಹುದು ಎನ್ನುತ್ತಾರೆ ಸಿ.ಎಚ್‌.ಹನುಮಂತರಾಯ.

‘ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 200 ಅಡಿಯಲ್ಲಿ ಈ ಪಿಟಿಷನ್‌ ದಾಖಲಿಸಿದ ನಂತರ ಪ್ರಕ್ರಿಯೆಗಳು ಮುಂದುವರೆಯುತ್ತವೆ. ಈ ರೀತಿ ಪ್ರಶ್ನಿಸುವ ಮುನ್ನ ಕ್ರಿಮಿನಲ್‌ ಪ್ರಕರಣಗಳ ವ್ಯವಹಾರ ನಿಯಮಗಳ ಅಡಿಯಲ್ಲಿ ಮತ್ತಷ್ಟು ತನಿಖೆ ನಡೆಸುವಂತೆ ಕೋರ್ಟ್ ಅನ್ನು ಕೇಳಬಹುದು. ಆ ರೀತಿ ಕೇಳುವಾಗ ಪ್ರೊಟೆಸ್ಟ್‌ ಪಿಟಿಷನ್‌ನಲ್ಲಿ ಸಕಾರಣ ಕಂಡು ಬಂದರೆ ತನಿಖೆ ಪರಿಪೂರ್ಣವಾಗಿಲ್ಲ ಎಂದು ನ್ಯಾಯಾಧೀಶರು ಇಂತಹ ದಿಕ್ಕಿನಲ್ಲಿ ತನಿಖೆ ಮುಂದುವರಿಸಿ ಬಿ.ರಿಪೋರ್ಟ್‌ ಸಲ್ಲಿಸಿ ಎಂದು ತನಿಖಾಧಿಕಾರಿಗೆ ನಿರ್ದೇಶಿಸಬಹುದು’ ಎನ್ನುತ್ತಾರೆ ಹನುಮಂತರಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.