ADVERTISEMENT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಶಾಸಕ ಸೋಮಶೇಖರ್‌ ಸವಾಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:20 IST
Last Updated 9 ನವೆಂಬರ್ 2024, 16:20 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಬೆಂಗಳೂರು: ‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಾಕತ್ತಿದ್ದರೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಶವಂತಪುರದಿಂದ ಸ್ಪರ್ಧಿಸಲಿ, ನನ್ನ ತಾಕತ್ತು ಪರೀಕ್ಷಿಸಲಿ’ ಎಂದು ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಸವಾಲು ಹಾಕಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, 'ಸೋಮಶೇಖರ್‌ ಅವರಿಗೆ ತಾಕತ್‌ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಗೆದ್ದು ತೋರಿಸಲಿ’ ಎಂದು ಕರಂದ್ಲಾಜೆ ಸವಾಲು ಹಾಕಿದ್ದಾರೆ. ಇಬ್ಬರೂ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸೋಣ ಎಂದು ಆಹ್ವಾನ ನೀಡಿದರು.

‘ಚಿಕ್ಕಮಗಳೂರಿನಲ್ಲಿ ಜನರು ಉಗಿದ ರೀತಿ ನನಗೆ ಯಾರೂ ಕ್ಯಾಕರಿಸಿ ಉಗಿದಿಲ್ಲ. ಅವರ ಪಾಪದ ಕೊಡ ತುಂಬಿಲ್ಲ, ತುಂಬುವವರೆಗೂ ತಾಳ್ಮೆಯಿಂದ ಕಾಯುತ್ತೇನೆ. ಅವರು ತಾಳ್ಮೆ ಕಳೆದುಕೊಂಡರೆ ಪಾಪದ ಕೊಡ ತುಂಬಿತೆಂದೇ ಅರ್ಥ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ರಾಜಕೀಯ ಆಶ್ರಯಕ್ಕೆ, ಕಮಿಷನ್‌ಗಾಗಿ ಕಾಂಗ್ರೆಸ್‌ ಕಡೆ ಹೋಗಿದ್ದಾರೆ ಎಂಬ ಆರೋಪ ನಿರಾಧಾರ. ಕ್ಷೇತ್ರದ ಅನುದಾನಕ್ಕಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ ಮಾಡುವುದು ಸಹಜ. ಬಿಜೆಪಿಯ ಎಷ್ಟು ನಾಯಕರು ರಾತ್ರಿ 12ರ ನಂತರ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಅವರೆಲ್ಲ ಕಮಿಷನ್‌ಗೆ ಭೇಟಿ ಮಾಡುತ್ತಾರಾ? ಯಲಹಂಕದ ಶಾಸಕ ವಿಶ್ವನಾಥ್‌ ಅವರು ಶಿವಕುಮಾರ್ ಅವರನ್ನು 15 ನಿಮಿಷ ಹೊಗಳಿದ್ದಾರೆ. ಅವರು ಕಮಿಷನ್‌ಗಾಗಿ ಹೊಗಳಿದರಾ’ ಎಂದು ಪ್ರಶ್ನಿಸಿದರು.

‘ಎಚ್‌.ಡಿ. ದೇವೇಗೌಡರಿಗೆ ರಾಜ್ಯದಲ್ಲಿ ವಿಶೇಷ ಗೌರವವಿದೆ. ಡಿ.ಕೆ. ಶಿವಕುಮಾರ್ ₹100ಕ್ಕೆ ಕೊತ್ವಾಲ್‌ ಹತ್ರ ಕೆಲಸಕ್ಕೆ ಇದ್ದರು ಎನ್ನುತ್ತಾರೆ. ಅವರ ಮೊಮ್ಮಕ್ಕಳಾದ ಸೂರಜ್‌ ರೇವಣ್ಣ, ಪ್ರಜ್ವಲ್‌ ರೇವಣ್ಣ ಹಾಸನದಲ್ಲಿ ಮಾಡಿದ ಕಥೆ ಏನು ಸ್ವಾಮಿ? ಊಟ ಮಾಡಿರುವುದು ಜೀರ್ಣವಾಗದೇ ಸಿದ್ದರಾಮಯ್ಯ, ಶಿವಕುಮಾರ್‌ ಟಾರ್ಗೆಟ್ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.