ADVERTISEMENT

ಶಿಕ್ಷಣ ಇಲಾಖೆಯ ಗೊಂದಲಕ್ಕೆ ಕಂದಾಯ ಮಂತ್ರಿ ಉತ್ತರ ಕೊಡಬೇಕಾ? –ಎ.ಎಚ್. ವಿಶ್ವನಾಥ್

ಪರಿಷ್ಕೃತ ಪಠ್ಯ ವಾಪಸ್‌ಗೆ ಬಿಜೆಪಿ ಎಂಎಲ್‌ಸಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 6:34 IST
Last Updated 27 ಜೂನ್ 2022, 6:34 IST
ಎ.ಎಚ್. ವಿಶ್ವನಾಥ್
ಎ.ಎಚ್. ವಿಶ್ವನಾಥ್   

ಮೈಸೂರು: ‘ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸುವ ಪಠ್ಯಕ್ರಮವನ್ನು ಇಡೀ ನಾಡು ಒಕ್ಕೊರಲಿಂದ ವಿರೋಧಿಸಿದೆ. ಆದ್ದರಿಂದ, ಆ ಪಠ್ಯವನ್ನು ವಾಪಸ್ ಪಡೆದು ಪ್ರಸಕ್ತ ಸಾಲಿನಲ್ಲಿ ಹಳೆಯದ್ದನ್ನೇ ಬೋಧಿಸಬೇಕು’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಒತ್ತಾಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಪಠ್ಯಕ್ರಮದ ವಿಷಯದಲ್ಲಿ ಮತ್ತು ಅಕ್ಷರದ ಮೇಲೆ ಸರ್ಕಾರ ಹಠ ಮಾಡಬಾರದು; ಪ್ರತಿಷ್ಠೆಯಾಗಿ ಸ್ವೀಕರಿಸಬಾರದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ವಿಷಯದಲ್ಲಿ ಹಠ ಮಾಡಲಿ, ಶಿಕ್ಷಣ ರಂಗವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿ’ ಎಂದರು.

‘ಪಠ್ಯ ಪರಿಷ್ಕರಣೆ ‍ಪ್ರಕ್ರಿಯೆ ಯಾವುದೋ ಪಕ್ಷದ ಕಾರ್ಯಕ್ರಮವಲ್ಲ. ಸದ್ಯ ಶಿಕ್ಷಣ ಇಲಾಖೆ ಅಧೋಗತಿಗೆ ಹೋಗುತ್ತಿದೆ. ಶಿಕ್ಷಣ ಇಲಾಖೆಯ ಗೊಂದಲಕ್ಕೆ ಕಂದಾಯ ಮಂತ್ರಿ ಉತ್ತರ ಕೊಡಬೇಕಾ? ನಗರಾಭಿವೃದ್ಧಿ ಸಚಿವರು ಉತ್ತರಿಸುತ್ತಾರೆ ಎಂದರೆ ಏನರ್ಥ? ಶಿಕ್ಷಣ ಸಚಿವ ನಾಗೇಶ್ ಏನು ಮಾಡುತ್ತಿದ್ದಾರೆ’ ಎಂದು ಕೇಳಿದರು.

ADVERTISEMENT

‘ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಹಿತಿಗಳು, ಪೋಷಕರು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ವಿಸ್ತೃತವಾಗಿ ಚರ್ಚಿಸಿ ಪಠ್ಯಪುಸ್ತಕ ಪರಿಷ್ಕರಿಸಬೇಕು. ಮುಂದಿನ ಶೈಕ್ಷಣಿಕ ಸಾಲಿನಿಂದ ಎಲ್ಲವನ್ನೂ ಸರಿಪಡಿಸಬೇಕು’ ಎಂದು ತಿಳಿಸಿದರು.

ಪಠ್ಯ ಪರಿಷ್ಕರಣೆ ಪರ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ದನಿ ಎತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಭೈರಪ್ಪ ದೊಡ್ಡ ಸಾಹಿತಿ. ಅವರು ಬಿಜೆಪಿ ವಕ್ತಾರರ ರೀತಿ ಮಾತನಾಡಬಾರದು. ಸಾರಸ್ವತ ಲೋಕದ ಸೌಂದರ್ಯ ಹೆಚ್ಚಿಸಬೇಕೇ ಹೊರತು, ಪಕ್ಷದ ವಕಾಲತ್ತು ವಹಿಸಬಾರದು. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.