ADVERTISEMENT

15 ದಿನಗಳಲ್ಲಿ ರೈತರ ಜಮೀನು ವಾಪಸ್ ಮಾಡಿ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:46 IST
Last Updated 27 ಅಕ್ಟೋಬರ್ 2024, 14:46 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ‘ರಾಜ್ಯ ಸರ್ಕಾರವು ವಕ್ಫ್ ಮಂಡಳಿ ಜತೆ ಸೇರಿ ವಿಜಯಪುರ ಜಿಲ್ಲೆಯಲ್ಲಿ ರೈತರಿಂದ 15 ಸಾವಿರ ಎಕರೆ ಕೃಷಿ ಭೂಮಿ ಕಬಳಿಸಲು ಮುಂದಾಗಿದೆ’ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ರೈತರಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡಿದೆ. ವಕ್ಫ್‌ ಹೆಸರಿನಲ್ಲಿ ರೈತರಿಂದ ಭೂಮಿ ಕಿತ್ತುಕೊಳ್ಳಲು ಹೊರಟಿದೆ. ಇವರಲ್ಲಿ ಬಹುತೇಕರು ಪರಿಶಿಷ್ಟ ಸಮುದಾಯದವರು. ಅವರಿಗೆ ನೋಟಿಸ್‌ ಕೊಟ್ಟು ಭೂಮಿ ಕಿತ್ತುಕೊಳ್ಳುವ ಮೂಲಕ ತುಘಲಕ್ ಆಡಳಿತ ಹೇರಲು ಪ್ರಯತ್ನಿಸಿದೆ’ ಎಂದು ದೂರಿದರು.

‘ವಕ್ಫ್‌ ಕಾಯ್ದೆಗೆ ತಿದ್ದುಪಡಿ ಕುರಿತು ಲೋಕಸಭೆ ಜಂಟಿ ಸದನ ಸಮಿತಿಯಲ್ಲಿ ಚರ್ಚೆ ನಡೆದಿದೆ. ಅಷ್ಟರೊಳಗೆ ಭೂಮಿ ಕಸಿಯುವ ಹುನ್ನಾರ ನಡೆದಿದೆ. ಸರ್ಕಾರ ಮತ್ತು ವಕ್ಫ್‌ ಮಂಡಳಿಗೆ 15 ದಿನ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಪಹಣಿ ತಿದ್ದುಪಡಿ ಮಾಡಿ ಯಾವ ರೈತರ ಹೆಸರಿನಲ್ಲಿತ್ತೋ ಅವರಿಗೆ ಜಮೀನು ಮಾಡಿಕೊಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಬೃಹತ್‌ ಹೋರಾಟ ಸಂಘಟಿಸಲಾಗುವುದು’ ಎಂದು ಕಾರಜೋಳ ಎಚ್ಚರಿಕೆ ನೀಡಿದರು.

ADVERTISEMENT

ಜಮೀರ್‌ ರಾಜೀನಾಮೆ ನೀಡಲಿ: ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಿಜಯಪುರಕ್ಕೆ ಹೋದಾಗ ರೈತರ ಭೂಮಿಯನ್ನು ವಕ್ಫ್‌ ಜಮೀನು ಎಂದು ಹೇಳಿದ್ದಾರೆ. ಆ ಬಳಿಕ ವಕ್ಫ್‌ ಮಂಡಳಿ ಅನೇಕ ರೈತರಿಗೆ ನೋಟಿಸ್‌ ನೀಡಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ ಎಂದು ತಿಳಿಸಿದರು.

‘ವಕ್ಫ್‌ ಆಸ್ತಿಯನ್ನು ಅಕ್ರಮವಾಗಿ ಹೆಚ್ಚಿಸಲು ವ್ಯವಸ್ಥಿತ ಪಿತೂರಿ ನಡೆದಿದೆ. ಇದಕ್ಕೆ ಜಮೀರ್ ಅವರೇ ಕಾರಣರು. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.