ಬೆಂಗಳೂರು: ಉದ್ಘಾಟನೆಗೊಂಡ ಮರುದಿನವೇ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ರಸ್ತೆ ಕಿತ್ತು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ, ‘ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದೆ. ಸದ್ಯ ದುರಸ್ತಿ ಕಾರ್ಯ ನಡೆದಿದೆ.
ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಲಾರಿ ಪಲ್ಟಿಯಾಗಿದ್ದು, ಕೆಎಸ್‌ಆರ್‌ಟಿಸಿ ವೊಲ್ವೊ ಬಸ್ ಸೇರಿದಂತೆ ಅನೇಕ ವಾಹನಗಳು ಸ್ಕಿಡ್ ಆಗಿದ್ದವು.
ದಶಪಥವಲ್ಲ ಭ್ರಷ್ಟಪಥ: ಕಾಂಗ್ರೆಸ್ ಟೀಕೆ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿನ ಡಾಂಬರು ಕಿತ್ತು ಬಂದಿದ್ದು, ಇದು ದಶಪಥವಲ್ಲ ಭ್ರಷ್ಟಪಥ ಎಂದು ಕಾಂಗ್ರೆಸ್ ಟೀಕಿಸಿದೆ.
‘ಅಭಿನಂದನೆಗಳು ನರೇಂದ್ರ ಮೋದಿ ಅವರೇ. ಒಂದು ವರ್ಷವಾದರೂ ಬಾಳಿಕೆ ಬರಬೇಕಿತ್ತು, ಒಂದು ತಿಂಗಳು, ಕೊನೆ ಪಕ್ಷ ಒಂದು ವಾರವಾದರೂ ಬಾಳಿಕೆ ಬರಬೇಕಿತ್ತು. ಆದರೆ ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಹೋಗಿದೆ, ರಾಜ್ಯದ ಶೇ 40 ಕೇಂದ್ರದ ಶೇ 40, ಒಟ್ಟು ಶೇ 80ರಷ್ಟು ಕಮಿಷನ್ ಕಾಮಗಾರಿಯ ಬಂಡವಾಳ ಹೊರಬಂದಿದೆ. ದಶಪಥವಲ್ಲ ಇದು ಭ್ರಷ್ಟಪಥ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಿತ್ತು ಹೋದ ರಸ್ತೆ ದುರಸ್ತಿ ಕಾಮಗಾರಿಯ ಗುದ್ದಲಿ ಪೂಜೆಗೆ ಮತ್ತೊಮ್ಮೆ ಮೋದಿಯನ್ನು ಕರೆಸಿ. ದುರಸ್ತಿಯಾದ ನಂತರ ಉದ್ಘಾಟನೆಗೆ ಇನ್ನೊಮ್ಮೆ ಮೋದಿ ಕರೆಸಿ. ಗುಂಡಿ ಮುಚ್ಚಿದ ಸಂತೋಷಕ್ಕಾಗಿ ಮಗದೊಮ್ಮೆ ಮೋದಿ ಕರೆಸಿ ರೋಡ್ ಶೋ ಮಾಡಿಸಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.