ADVERTISEMENT

ನೆಹರು, ಇಂದಿರಾ ಪಾದದ ಧೂಳಿಗೆ ನಾನು ಸಮನಲ್ಲ, ಆದರೆ...:ರವಿ ಟ್ವೀಟ್‌ನಲ್ಲಿ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2021, 11:26 IST
Last Updated 13 ಆಗಸ್ಟ್ 2021, 11:26 IST
   

ಬೆಂಗಳೂರು: ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಿ.ಟಿ ರವಿ ಸಮವಲ್ಲ ಎಂಬ ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಅವರ ಟೀಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಶುಕ್ರವಾರ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಮಾನ್ಯ ದಿನೇಶ್‌ ಗುಂಡೂರಾವ್‌ ಅವರೇ, ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಾನು ನೆಹರು ಹಾಗೂ ಇಂದಿರಾ ಗಾಂಧಿಯವರ ಪಾದದ ಧೂಳಿಗೆ ಖಂಡಿತ ಸಮಾನ ಅಲ್ಲ. ಈ ಮಹಾ ಭಾಗ್ಯ ಗುಲಾಮರಿಗೆ ಮಾತ್ರ ಮೀಸಲು,‘ ಎಂದು ಅವರು ಮೂದಲಿಸಿದ್ದಾರೆ.

ADVERTISEMENT

‘ರಾಷ್ಟ್ರಭಕ್ತರ ಹಾಗೂ ಮಹಾನ್ ಸಾಧಕರ ಪಾದದ ಧೂಳಿಗೆ ಸಮಾನವಾಗ ಬಯಸುತ್ತೇನೆಯೇ ಹೊರತು ದೇಶವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡವರ ಪಾದದ ಧೂಳಿಗಲ್ಲ,‘ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್‌ನ ಹೆಸರು ಬದಲಾಗಬೇಕು ಎಂದು ಸಿ.ಟಿ ರವಿ ಕೆಲ ದಿನಗಳ ಹಿಂದೆ ಆಗ್ರಹಿಸಿದ್ದರು. ಈ ಕುರಿತ ವಿವಾದದ ಜ್ವಾಲೆ ಉರಿಯುತ್ತಿರುವಾಗಲೇ ಮತ್ತೊಮ್ಮೆ ಮಾತನಾಡಿದ್ದ ಸಿ.ಟಿ ರವಿ, ಕಾಂಗ್ರೆಸ್ಸಿಗರು ತಮಗೆ ಅಗತ್ಯವಿದ್ದರೆ ನೆಹರು, ಇಂದಿರಾ ಹೆಸರಲ್ಲಿ ಹುಕ್ಕಾಬಾರ್‌ಗಳನ್ನು ತೆರೆಯಲಿ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿಯ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಮವಿಲ್ಲದ ಸಿ.ಟಿ ರವಿ, ಅವರ ಬಗ್ಗೆ ಕೀಳಾಗಿ ಮಾತನಾಡುವುದು ಅವರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ, ‘ಎಂದಿದ್ದರು.

‘ಕಾಂಗ್ರೆಸ್ ಕಚೇರಿಯನ್ನು ಹುಕ್ಕಾ ಬಾರ್ ಮಾಡಲು ಸಲಹೆ ಕೊಟ್ಟಿರುವ ರವಿ, ಕೇಶವ ಕೃಪಾ ಕಚೇರಿ ಯನ್ನು 'ಡ್ಯಾನ್ಸ್ ಬಾರ್‌' ಮಾಡಿ ಆಧುನಿಕ 'ಬೃಹನ್ನಳೆ'ಯಂತೆ ನಾಟ್ಯ ಮಾಡುತ್ತಾರೆಯೇ?,‘ ಎಂದೂ ಪ್ರಶ್ನೆ ಮಾಡಿ ಕುಹಕವಾಡಿದ್ದರು.

ದಿನೇಶ್‌ ಅವರ ಟ್ವೀಟ್‌ಗೆ ರವಿ ಶುಕ್ರವಾರ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.