ADVERTISEMENT

ತಕ್ಷಣ ವಿಶೇಷ ಅಧಿವೇಶನ ಕರೆಯಿರಿ: ಸುನಿಲ್ ಒತ್ತಾಯ

‘ಜಾತಿ ಗಣತಿಯೋ ಶೈಕ್ಷಣಿಕ ಸಮೀಕ್ಷೆಯೋ?’

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 16:07 IST
Last Updated 29 ಫೆಬ್ರುವರಿ 2024, 16:07 IST
ವಿ.ಸುನಿಲ್‌ ಕುಮಾರ್‌
ವಿ.ಸುನಿಲ್‌ ಕುಮಾರ್‌   

ಬೆಂಗಳೂರು: ‘ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ವಿಸ್ತೃತ ಚರ್ಚೆ ನಡೆಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಶಾಸಕ ಹಾಗೂ ಬಿಜೆ‍ಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌ ಒತ್ತಾಯಿಸಿದರು.

‘10 ವರ್ಷಗಳ ಸುದೀರ್ಘ ವನವಾಸದ ಬಳಿಕ ಸ್ವೀಕರಿಸಿರುವ ವರದಿಯ ಸ್ವರೂಪ ಏನೆಂಬುದು ಮೊದಲು ನಿರ್ಧಾರವಾಗಬೇಕಿದೆ. ಇದು ಜಾತಿ ಗಣತಿಯೋ ಶೈಕ್ಷಣಿಕ ಅಥವಾ ಆರ್ಥಿಕ ಸಮೀಕ್ಷೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದೂ ಆಗ್ರಹಿಸಿದರು.

‘₹150 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿರುವ ರಾಜ್ಯ ಸರ್ಕಾರ ಸಮಾಜದಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ. ಈ ವರದಿ ಜಾರಿಗೆ ಮುನ್ನ ವಿಸ್ತೃತ ಚರ್ಚೆಯ ಅಗತ್ಯವಿದೆ. ಹೀಗಾಗಿ ಶಾಸನ ಸಭೆಯಲ್ಲಿ ವರದಿಯನ್ನು ಮಂಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಾದದ್ದು ಸರ್ಕಾರದ ಕರ್ತವ್ಯ’ ಎಂದು ಹೇಳಿದರು.

ADVERTISEMENT

‘ಈ ವರದಿ ವಿಚಾರದಲ್ಲಿ ದಶಮಾನದ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಿ ಕೈ ತೊಳೆದುಕೊಂಡರೆ ಸಾಲದು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಆಶಯಕ್ಕೆ ಆಯೋಗ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಆದರೆ, ಅವರ ಉದ್ದೇಶ ಗೊಂದಲವನ್ನು ಜೀವಂತವಾಗಿಡುವುದೇ ಆಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.