ADVERTISEMENT

ಹುಬ್ಬಳ್ಳಿ ಗಲಭೆ ಕೇಸ್‌ ಹಿಂಪಡೆದಿದ್ದಕ್ಕೆ ವಿರೋಧ: ರಾಜ್ಯಪಾಲರಿಗೆ ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 11:17 IST
Last Updated 14 ಅಕ್ಟೋಬರ್ 2024, 11:17 IST
   

ಬೆಂಗಳೂರು:  ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರವಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ, ದಾಳಿ ಮಾಡಿದ್ದ, ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿಂದಕ್ಕೆ ಪಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದ್ದು, ಅದನ್ನು ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಹೋಗಲು ಕೂಡ ಕಾಂಗ್ರೆಸ್ ಸರಕಾರ ಹೇಸುವುದಿಲ್ಲ ಎಂದು ದೂರಿದರು.

ADVERTISEMENT

ಸಿಎಂಗೆ ಸವಾಲು:

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ. ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿಯೇ ಇರುತ್ತಾರೆ ಎನ್ನುವುದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಹೇಳಿಸಲಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ವಿಜಯೇಂದ್ರ ಸವಾಲು ಹಾಕಿದರು. 

ಖರ್ಗೆಯವರು ರಾಜ್ಯ ರಾಜಕಾರಣದ ಕುರಿತು ಮಾತನಾಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ನಮ್ಮ ಪಕ್ಷದ ಹೋರಾಟದ ಬಳಿಕ ಮುಡಾ ಹಗರಣದಲ್ಲಿ ಕದ್ದ ಮಾಲನ್ನು ವಾಪಸ್‌ ಕೊಡಲು ಸಿದ್ದರಾಮಯ್ಯ ನಿರ್ಧರಿಸಿದರು. ಮುಖ್ಯಮಂತ್ರಿಯವರ ಪಾಪದ ಕೊಡ ತುಂಬಿದೆ. ಅವರು ರಾಜೀನಾಮೆ ಕೊಡುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಎಂದು ಹೇಳಿದರು.

ರಾಜ್ಯಪಾಲರಿಗೆ ದೂರು ಸಲ್ಲಿಕೆ:

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯ ಬಳಿಕ ಬಿಜೆಪಿ ನಾಯಕರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿ ಪತ್ರವೊಂದನ್ನು ಸಲ್ಲಿಸಿದರು.

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಮತ ಬ್ಯಾಂಕ್‌ ರಾಜಕಾರಣ ಮತ್ತು ಹಗರಣಗಳನ್ನು ಮರೆ ಮಾಚಲು ಕ್ರಿಮಿನಲ್‌ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಕುರ್ಚಿ ಅಲುಗಾಡುತ್ತಿರುವ ಸಮಯದಲ್ಲಿ ಮುಸ್ಲಿಮರು ನನ್ನ ಪರವಾಗಿದ್ದಾರೆ ಎಂದು ತೋರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ ಎಂದರು.

ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರ ಮುಚ್ಚಿ ಹಾಕಿದೆ. ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ಮುಸ್ಲಿಂ ಓಟುಗಳನ್ನು ಗಟ್ಟಿ ಮಾಡಿಕೊಳ್ಳಲು ಹೀಗೆ ಮಾಡಲಾಗಿದೆ. ರೈತರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯಲು ಮನವಿ ಮಾಡಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ಹೇಳಿದರು.

ಹಿಂದೂಗಳು ತಾವು ಹಿಂದೂ ಎಂದ ತಕ್ಷಣ ನಿಮಗ್ಯಾಕೆ ಬೆಂಕಿ ಬೀಳುತ್ತದೆ. ಇದಕ್ಕೆ ಉತ್ತರ ಕೊಡಲು ಸಾಧ್ಯವೇ? ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಿ ಗಾಯ ಮಾಡಿ ಆಸ್ಪತ್ರೆ ಸೇರುವಂತೆ ಮಾಡಿದವರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯುತ್ತಿರುವುದು ಅಕ್ಷಮ್ಯ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಎಸ್‌. ಆರ್‌. ವಿಶ್ವನಾಥ್, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಿ.ಟಿ.ರವಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.