ಬೆಂಗಳೂರು: ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಬಿಜೆಪಿ ‘ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ತುಂಬಿದೆ’ ಎಂದು ಟೀಕಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಕಾರ್ಟೂನು, ದಿನಪತ್ರಿಕೆಗಳ ತಲೆಬರಹಗಳ ಚಿತ್ರ, ವ್ಯಾರಂಟಿ ಇಲ್ಲದ ಗ್ಯಾರಂಟಿ ಎನ್ನುವ ಪೋಸ್ಟ್ ಸೇರಿ ಹಲವು ರೀತಿಯಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಶೂನ್ಯ ಸಾಧನೆ, ಕನ್ನಡಿಗರಿಗೆ ವೇದನೆ, ಸುಳ್ಳು-ಮೋಸ-ವಂಚನೆಯ ಜೊತೆ ಕನ್ನಡಿಗರ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಸಂಪೂರ್ಣ ಹಾಳುಗೆಡವಿದೆ ಕಾಂಗ್ರೆಸ್, ಹಿಂದುಳಿದ ವರ್ಗಗಳಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ– ರಾಜ್ಯ ದಿವಾಳಿ, ಕನ್ನಡಿಗರಿಗೆ ಕಾಂಗ್ರೆಸ್ ತೋರಿಸಿದ್ದು ಬೆಣ್ಣೆ– ಕೊಟ್ಟಿದ್ದು ಮಾತ್ರ ಸೊನ್ನೆ... ಹೀಗೆ ಹಲವು ರೀತಿಯಲ್ಲಿ ಬರೆದು ಪೋಸ್ಟ್ ಹಂಚಿಕೊಂಡಿದೆ.
ರಾಜ್ಯ ಸರ್ಕಾರವನ್ನು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ‘ಪೂರೈಸಿದ್ದು ವರುಷ ಮಾತ್ರ ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ ಖಾಲಿ ವಸೂಲಿ ಭಾರಿ ಭಾರಿ. ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ ನಿರುದ್ಯೋಗದ ಭವಣೆ ಹೆಚ್ಚಿತು, ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು. ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು, ಹಿಂದುಳಿದವರ ಅಭಿವೃದ್ಧಿ ಹಿಂದುಳಿಯಿತು, ಬೆಳೆಯೆಲ್ಲ ಒಣಗಿತು, ರೈತರ ಬಾಳು ಗೋಳಾಯಿತು.’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.