ಬೆಂಗಳೂರು: ವಕ್ಫ್ ಸಮಸ್ಯೆಗೆ ಸಂಬಂಧಿಸಿದಂತೆ ಪಕ್ಷದ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡಿ ಹೋರಾಟ ನಡೆಸುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ ಅವರು ಪಕ್ಷದ ಹಿರಿಯ ನಾಯಕರು. ಪ್ರವಾಸದಲ್ಲಿ ಅವರೂ ಇರಲಿದ್ದಾರೆ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.
ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಕ್ಫ್ ಹೋರಾಟ ವಿಚಾರದಲ್ಲಿ ಪಕ್ಷದ ನಾಯಕರ ಮಧ್ಯೆ ಯಾವುದೇ ಗೊಂದಲ ಇಲ್ಲ. ರೈತರು, ಮಠಗಳು, ಸಾರ್ವಜನಿಕರಿಗೆ ವಕ್ಫ್‌ನಿಂದ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಎಲ್ಲರೂ ಒಟ್ಟಾಗಿ ಹೋರಾಡಿ, ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುತ್ತೇವೆ’ ಎಂದರು.
‘ವಕ್ಫ್ ಹೋರಾಟದ ಸಂಬಂಧ ಉಪ ಚುನಾವಣೆಗೂ ಮುನ್ನ ಸಭೆ ನಡೆಸಿದ್ದೆವು. ಚುನಾವಣೆ ಸಂದರ್ಭದಲ್ಲಿ ಸಹಜವಾಗಿ ಅತ್ತಲೇ ಗಮನ ಕೊಟ್ಟಿದ್ದೇವೆ. ಈಗ ಸಭೆ ನಡೆಸಿ, ಹೋರಾಟದ ಸ್ವರೂಪ ಮತ್ತು ದಿನಾಂಕಗಳನ್ನು ನಿರ್ಧರಿಸುತ್ತೇವೆ. ಈ ಹೋರಾಟದಲ್ಲಿ ಪಕ್ಷದ ಕಟ್ಟಕಡೆಯ ಕಾರ್ಯಕರ್ತರೂ ಭಾಗಿಯಾಗಲಿದ್ದಾರೆ’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ರಾಜಕೀಯದಲ್ಲಿ ಅಭಿಪ್ರಾಯ ಭೇದಗಳಿದ್ದರೆ ಅದನ್ನು ಸ್ವಾಗತಿಸಬೇಕು. ವೈಯಕ್ತಿಕ ಅನಿಸಿಕೆಗಳನ್ನು ಹತ್ತಿಕ್ಕುವುದಿಲ್ಲ. ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಲ್ಲೂ ಭಿನ್ನಾಭಿಪ್ರಾಯವಿದೆ. ಅದು ಇದ್ದರಷ್ಟೇ ಪಕ್ಷ ಸರಿದಾರಿಯಲ್ಲಿ ನಡೆಯುತ್ತದೆ’ ಎಂದರು.
40% ಆರೋಪ ನಿರಾಧಾರ: ವಿಜಯೇಂದ್ರ
‘ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗಿದ್ದ 40% ಕಮಿಷನ್ ಆರೋಪದಲ್ಲಿ ಹುರುಳಿಲ್ಲ ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುದ್ದಿಯೊಂದನ್ನು ಪೋಸ್ಟ್‌ನಲ್ಲಿ ಲಗತ್ತಿಸಿರುವ ಅವರು, ‘ಆರೋಪ ಮಾಡಿದ್ದ ಅಂಬಿಕಾಪತಿ ಹಲವು ವರ್ಷಗಳಿಂದ ಯಾವುದೇ ಗುತ್ತಿಗೆ ಪಡೆದಿರಲಿಲ್ಲ ಎಂಬುದು ಲೋಕಾಯುಕ್ತ ತನಿಖಾ ವರದಿಯಲ್ಲಿದೆ’ ಎಂದಿದ್ದಾರೆ.
ಇದೇ ವಿಷಯವಾಗಿ ಪೋಸ್ಟ್ ಮಾಡಿರುವ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ‘40% ಕಮಿಷನ್ ಆರೋಪ ಚುನಾವಣೆಗಾಗಿ ಸೃಷ್ಟಿ ಮಾಡಿದ್ದ ಸುಳ್ಳು, ಅಪಪ್ರಚಾರ ಎಂದು ಕಾಂಗ್ರೆಸ್‌ನ ಹಲವು ನಾಯಕರೇ ಒಪ್ಪಿಕೊಂಡಿದ್ದಾರೆ. ಜನರು ಈ ಸರ್ಕಾರವನ್ನು ಮನೆಗೆ ಕಳುಹಿಸುವ ದಿನ ದೂರವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.