ಬೆಂಗಳೂರು: ರೈತರ ಜಮೀನುಗಳಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು, ರಾಯಚೂರು, ಕೊಪ್ಪಳ, ಮಂಡ್ಯ, ಮೈಸೂರು, ಬೀದರ್, ಕಲಬುರಗಿ, ಮಂಗಳೂರು, ಧಾರವಾಡ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ವಕ್ಫ್ ಮಂಡಳಿಯನ್ನು ರದ್ದುಪಡಿಸಬೇಕು, ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ರೈತರ ಹೆಸರಿಗೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಒಂಬತ್ತು ಜಿಲ್ಲೆಗಳಲ್ಲಿ ಗುರುವಾರ ಪ್ರತಿಭಟನೆ ನಡೆದಿತ್ತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೆ ಪ್ರತಿಭಟನೆ ನಡೆಯಿತು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಚಾಮರಾಜಪೇಟೆಯಲ್ಲಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡರು.
ಮಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಂಸದೆ ಸುಮಲತಾ, ‘ರೈತರ ಕೃಷಿ ಭೂಮಿ, ಮಠ ಮತ್ತು ದೇವಸ್ಥಾನಗಳ ಜಮೀನು ಕಬಳಿಸುವ ಪ್ರಯತ್ನ ನಡೆದಿದೆ. ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಬಾಂಗ್ಲಾದೇಶದ ಪರಿಸ್ಥಿತಿ ನಮ್ಮಲ್ಲೂ ಬರುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ, ‘ಶಾಂತಿ, ಸಾಮರಸ್ಯದ ನಾಡಾಗಿದ್ದ ಕರ್ನಾಟಕವನ್ನು ಆತಂಕದ ಸ್ಥಿತಿಗೆ ತಳ್ಳುತ್ತಿದೆ. ರೈತರ, ಮಠ–ಮಂದಿರಗಳ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ದಾಖಲೆಗಳಲ್ಲಿ ಸೇರ್ಪಡೆ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸಚಿವ ಜಮೀರ್ ನೇತೃತ್ವದಲ್ಲಿ ರೈತರ ಮತ್ತು ಮಠಗಳ ಆಸ್ತಿ ಕಬಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ರೈತರು ಪ್ರತಿಭಟನೆ ನಡೆಸಿದರು. ‘ನಮ್ಮ ರೈತರ ಆಸ್ತಿ ಪಾಕಿಸ್ತಾನದಿಂದ ಬಂದ ಭೂಮಿ ಅಲ್ಲ. ರೈತರ ಹೊಟ್ಟೆ ಉರಿಸುತ್ತಿರುವ ರಾಜ್ಯ ಸರ್ಕಾರ ಉದ್ಧಾರ ಆಗಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್‌ನಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ‘ವಕ್ಫ್ ಆದಾಲತ್ ನಡೆಸದಂತೆ ತಕ್ಷಣ ತಡೆ ನೀಡಬೇಕು. ವಕ್ಫ್ ಗೆಜೆಟ್ ಅಧಿಸೂಚನೆ ರದ್ದುಗೊಳಿಸಬೇಕು’ ಎಂದು ಆಗ್ರಹಿಸಲಾಯಿತು.
ಕಲಬುರಗಿಯಲ್ಲಿ ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆಯಡಿ ‘ವಕ್ಫ್ ಹಠಾವೋ, ಅನ್ನದಾತ ಬಚಾವೋ’ ಹೆಸರಿನಲ್ಲಿ ಎರಡನೇ ದಿನವೂ ಪ್ರತಿಭಟನೆ ನಡೆಯಿತು. ವಿಜಯಪುರ ಜಿಲ್ಲೆಯ ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಚಿಂಚೋಳಿ ಶಾಸಕ ಅವಿನಾಶ ಜಾಧವ ಪಾಲ್ಗೊಂಡಿದ್ದರು.
ಮಂಗಳೂರಿನಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪ್ರತಿ ಹಿಂದೂವಿನ, ಬಡವರ ಭೂಮಿ ರಕ್ಷಣೆಗಾಗಿ ಬಿಜೆಪಿ ಮಹಾ ಅಭಿಯಾನ ನಡೆಸುತ್ತಿದೆ. ಪ್ರತಿ ಮನೆಗೆ ನಮ್ಮ ಕಾರ್ಯಕರ್ತರು ಹೋಗಿ ಆರ್‌ಟಿಸಿ ನೋಡಿ ನಮ್ಮ ಭೂಮಿ ನಮಗೇ ಉಳಿದಿದೆಯಾ ಎಂದು ಪರೀಕ್ಷಿಸಲಿದ್ದಾರೆ’ ಎಂದರು.
ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಪಕ್ಷವು ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ. ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ– ಮಾನ್ಯಗಳ ಜಮೀನು ಕಬಳಿಸುವ ಹುನ್ನಾರ ನಡೆಸಿದೆ. ಸಚಿವ ಜಮೀರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.