ವಿಧಾನಸಭೆ: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆ ಪಡೆದೇ ಸದನದಿಂದ ಹೊರನಡೆಯುತ್ತೇವೆ ಎಂಬ ಉಮೇದಿನಿಂದ ಬಂದಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು, ಸರ್ಕಾರದ ಬಿಗಿಪಟ್ಟಿನಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗಕ್ಕೆ ಸೋಮವಾರದ ಕಲಾಪ ಸಾಕ್ಷಿಯಾಯಿತು.
ಕಳೆದ ವಾರ ‘ಸಭಾತ್ಯಾಗ’ದ ನಿರ್ಣಯದಿಂದ ಪಕ್ಷದ ಆಂತರಿಕ ಸಂಘರ್ಷ ಬಯಲಿಗೆ ಬಂದು, ಬಿಜೆಪಿ ನಾಯಕತ್ವ ಮುಜುಗರ ಅನುಭವಿಸಿತ್ತು. ಅದನ್ನು ಮರೆಸಿ, ಪ್ರತಿಪಕ್ಷದ ವೈಭವವನ್ನು ಮೆರೆಸಲು ಮುಂದಾದಂತಿದ್ದ ಸದಸ್ಯರು ಮಧ್ಯಾಹ್ನದ ಹೊತ್ತಿಗೆ ಹೈರಾಣಾದರು.
ಕಲಾಪದಲ್ಲಿ ವಿಷಯ ಪ್ರಸ್ತಾಪಿಸಲು ನೋಟಿಸ್(ಸೂಚನಾ ಪತ್ರ) ನೀಡದೇ, ಏಕಾಏಕಿ ಪ್ರಸ್ತಾಪಿಸಲು ಮುಂದಾದ ಪ್ರತಿಪಕ್ಷದ ಪ್ರಮಾದವನ್ನೇ ಮುಂದಿಟ್ಟ ಸರ್ಕಾರ, ‘ಮೊದಲು ನೋಟಿಸ್ ಕೊಡಿ’ ಎಂದು ಪಟ್ಟು ಹಿಡಿಯಿತು. ‘ಸಚಿವ ಜಮೀರ್ ರಾಜೀನಾಮೆ ನೀಡಬೇಕು, ಇಲ್ಲವೇ ವಜಾ ಮಾಡಬೇಕು’ ಎಂದು ಹಟಕ್ಕೆ ಕುಳಿತ ವಿರೋಧ ಪಕ್ಷದ ನಾಯಕ ಆರ್. ಅಶೋಕ, ತಮ್ಮ ಸದಸ್ಯರನ್ನು ಸಭಾಧ್ಯಕ್ಷರ ಪೀಠದ ಎದುರು ದೂಡಿದರು. ಜೆಡಿಎಸ್ ಸದಸ್ಯರು ಜತೆಯಾದರು. ಈ ಹೊತ್ತಿನಲ್ಲಿ, ಆಡಳಿತ–ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರ ನಡೆಯಿತು.
ಉತ್ತರ ಕರ್ನಾಟಕದ ಚರ್ಚೆ ಮತ್ತು ಬರದ ಮೇಲಿನ ಚರ್ಚೆಗೆ ಸರ್ಕಾರದ ಉತ್ತರ ಕೇಳಲು ಆಸಕ್ತಿ ಇಲ್ಲ ಎಂದು ಪ್ರತಿಪಕ್ಷ ಸದಸ್ಯರನ್ನು ಹಂಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮೊದಲಾದವರು, ಬಿಜೆಪಿಯನ್ನು ಕಟ್ಟಿಹಾಕಿದರು.
ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ಅಬ್ಬರದ ಮಧ್ಯೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಪ್ರಶ್ನೋತ್ತರ ಮುಗಿಸಿದರು. ಜತೆಗೆ, ಐದು ಮಸೂದೆಗಳ ಅಂಗೀಕಾರ, ಆರು ಮಸೂದೆಗಳ ಮಂಡನೆ ಮಾಡಿಸಿದರು. ಮಧ್ಯಾಹ್ನದ ಭೋಜನ ವಿರಾಮಕ್ಕೂ ಅವಕಾಶ ಕೊಡದ ವಾತಾವರಣ ನಿರ್ಮಾಣ ಮಾಡಿ ಸಭಾಧ್ಯಕ್ಷರು, ವಿರೋಧ ಪಕ್ಷದ ಸದಸ್ಯರನ್ನು ಕಂಗೆಡಿಸಿದರು. ಮತ್ತೆ ಭೋಜನ ವಿರಾಮಕ್ಕೆ ಅವಕಾಶವನ್ನೂ ಕೊಟ್ಟರು.
ಮತ್ತೆ ಕಲಾಪ ಆರಂಭವಾದಾಗ, ಬರದ ಮೇಲಿನ ಚರ್ಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಲು ಮುಂದಾದಾಗ, ವಿರೋಧಿ ಸದಸ್ಯರು ಮತ್ತೆ ಆರ್ಭಟ ಮುಂದುವರಿಸಿದರು. ಅದನ್ನು ಲೆಕ್ಕಿಸದೇ ಸಚಿವರು ಉತ್ತರ ನೀಡತೊಡಗಿದಾಗ ಬಿಜೆಪಿ, ಜೆಡಿಎಸ್‌ನ ಬಹುತೇಕ ಸದಸ್ಯರು ಮೌನಕ್ಕೆ ಶರಣರಾದರು. ಕೆಲವು ಸದಸ್ಯರು ಹೊರ ನಡೆದರು. ಮತ್ತೆ ಕೆಲವರು, ಸಭಾಧ್ಯಕ್ಷರ ಪೀಠದ ಎದುರಿನ ನೆಲದ ಮೇಲೆ ಕುಳಿತರು. ಮಧ್ಯೆ ಮಧ್ಯೆ ಘೋಷಣೆಗಳನ್ನು ಕೂಗುವುದು ಬಿಟ್ಟರೆ, ಸುಗಮವಾಗಿ ಕಲಾಪ ನಡೆಯಿತು.
ಗಮನ ಸೆಳೆಯುವ ಸೂಚನೆ, ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲಿನ ಚರ್ಚೆ ಮತ್ತು ಸರ್ಕಾರದ ಉತ್ತರದ ಕಲಾಪ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮ್ಮುಖದಲ್ಲಿ ನಡೆಯಿತು.
ಸಂಜೆ 7ಕ್ಕೆ ಸದನಕ್ಕೆ ಬಂದ ಸಭಾಧ್ಯಕ್ಷ ಖಾದರ್, ‘ವಿರೋಧ ಪಕ್ಷದ ಸದಸ್ಯರು ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದೀರಿ. ನಾಳೆಯೂ ಹೀಗೆಯೇ ಕೊಡಿ’ ಎಂದರು.
ಇದರಿಂದ ಸಿಟ್ಟಿಗೆದ್ದಂತಾದ ಆರ್. ಅಶೋಕ, ‘ನಮಗೆ ಅವಮಾನ ಮಾಡಿದ್ದೀರಿ. ನೀವು ಮಾತ್ರ ಊಟ, ತಿಂಡಿ ಎಲ್ಲವನ್ನೂ ಮುಗಿಸಿಕೊಂಡು ಬಂದಿರಿ. ಮಧ್ಯರಾತ್ರಿ 1 ಗಂಟೆಯವರೆಗೂ ಮುಂದುವರಿಸಿ. ನಾವು ಸಿದ್ಧ ಎಂದು ಗುಟುರು ಹಾಕಿದರು’. ಮಧ್ಯಾಹ್ನದವರೆಗಿನ ಅಬ್ಬರ, ಬಳಿಕ ಸಪ್ಪೆಯಾಗಿತ್ತು.
ಚರ್ಚೆಗೆ ಮಂಗಳವಾರ ಅವಕಾಶ ಕೊಡುವುದಾಗಿ ಹೇಳಿದ ಸಭಾಧ್ಯಕ್ಷರು, ಕಲಾಪವನ್ನು ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.