ADVERTISEMENT

ಜಿಟಿಡಿಗೆ ಭಯ ಕಾಡುತ್ತಿದೆ: ಎನ್. ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:20 IST
Last Updated 5 ಅಕ್ಟೋಬರ್ 2024, 15:20 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಬೆಂಗಳೂರು: ‘ತಮ್ಮ ನಿವೇಶನಗಳಿಗೂ ಸಂಚಕಾರ ಬರಬಹುದು ಎಂಬ ಭಯ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕಾಡುತ್ತಿರಬಹುದು. ಹಾಗಾಗಿಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಿಂತಿದ್ದಾರೆ’ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್. ರವಿಕುಮಾರ್‌ ಶನಿವಾರ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿ.ಟಿ.ದೇವೇಗೌಡರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಎಫ್‌ಐಆರ್ ದಾಖಲಾದ ಎಲ್ಲರೂ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಅವರ ಹೇಳಿಕೆ ಅವರನ್ನು ರಕ್ಷಿಸಿಕೊಳ್ಳುವ ರೀತಿ ಇದೆ. ಮುಡಾ ನಿವೇಶನ ಹಂಚಿಕೆಯ ಎಲ್ಲ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಸತ್ಯಾಂಶ ಹೊರಬರಲಿದೆ’ ಎಂದರು.

ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಅವರು, ‘ಸಿದ್ದರಾಮಯ್ಯ ಹಾಗೂ ಸರ್ಕಾರದ ಹೊಗಳುಭಟರಂತೆ ಭಾಷಣ ಮಾಡಿದ್ದಾರೆ. ಇದು ದಸರಾ ಇತಿಹಾಸಕ್ಕೇ ಕಪ್ಪುಚುಕ್ಕಿ’ ಎಂದು ಟೀಕಿಸಿದರು.

ADVERTISEMENT

ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಸಾವರ್ಕರ್‌ ಅವರನ್ನು ಕುರಿತು ಟೀಕಿಸಿದ ಸಚಿವ ದಿನೇಶ್‌ ಗುಂಡೂರಾವ್‌ ಕ್ಷಮೆ ಯಾಚಿಸಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದೂ ಆಗ್ರಹ ಪಡಿಸಿದರು. 

ಅಲುಗಾಡುತ್ತಿದೆ ಮುಖ್ಯಮಂತ್ರಿ ಕುರ್ಚಿ: ರಾಜೀವ್‌ ‘ವಿರೋಧಪಕ್ಷಗಳ ಮಾತಿಗೆ ‘ಜಗ್ಗಲ್ಲ ಬಗ್ಗಲ್ಲ’ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ಆತ್ಮಸಾಕ್ಷಿ ಮಾತು ಆಡುತ್ತಿರುವುದು ಸಿ.ಎಂ ಕುರ್ಚಿ ಅಲುಗಾಡುತ್ತಿರುವುದರ ಸಂಕೇತ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಕೆಳಗೆ ಇಳಿಯುವುದು ಅವರ ಪಕ್ಷದವರಿಗೂ ಮನವರಿಕೆಯಾಗಿದೆ. ಅದಕ್ಕಾಗಿ ಕಾಂಗ್ರೆಸ್‌ನಲ್ಲಿ ಕುರ್ಚಿ ಯುದ್ಧ ಆರಂಭವಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿಭಟನೆಗೆ ಕುಳಿತಿದ್ದಾರೆ. ಗ್ರಾಮಗಳಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇಲಾಖೆಯ ಆಡಳಿತ ನಿಭಾಯಿಸುವಲ್ಲಿ ಪ್ರಿಯಾಂಕ್‌ ಖರ್ಗೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.