ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರವಾಗಿಗೃಹ ಸಚಿವ ಎಂ.ಬಿ. ಪಾಟೀಲ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ರೀತಿಯಲ್ಲಿ ಪತ್ರವನ್ನು ಸೃಷ್ಟಿಸಿದ್ದ ಪ್ರಕರಣದಲ್ಲಿ ಪತ್ರಕರ್ತ ಎಸ್.ಎ. ಹೇಮಂತ್‌ಕುಮಾರ್ (57) ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಸವೇಶ್ವರ ನಗರದ ನಿವಾಸಿ ಆದ ಹೇಮಂತ್ ಕುಮಾರ್, ದೆಹಲಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ‘ಉದಯ್ ಇಂಡಿಯಾ’ ವಾರಪತ್ರಿಕೆಯ ವಿಶೇಷ ಪ್ರತಿನಿಧಿ ಆಗಿದ್ದಾರೆ. ಬಿಜೆಪಿಯಲ್ಲಿ ಅವರು ಗುರುತಿಸಿಕೊಂಡಿದ್ದರು.
‘ಪ್ರಕರಣ ಸಂಬಂಧ ಪುರಾವೆಗಳನ್ನು ಸಂಗ್ರಹಿಸಿ ಆರೋಪಿ ಹೇಮಂತ್‌ಕುಮಾರ್ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 30ರವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿಯ ಐಜಿಪಿ ಹೇಮಂತ್ ನಿಂಬಾಳ್ಕರ್ ತಿಳಿಸಿದರು.
‘ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್ ಬಳಸಿ ನಕಲಿ ಪತ್ರ ಸೃಷ್ಟಿಸಿದ್ದ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಪಾಟೀಲ ಅವರು ವಿಜಯಪುರದ ಆದರ್ಶನಗರ ಠಾಣೆಗೆ ದೂರು ಕೊಟ್ಟಿದ್ದರು. ಆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರಕರಣದ ಮೊದಲ ಆರೋಪಿಯನ್ನು ಈಗ ಬಂಧಿಸಲಾಗಿದೆ’ ಎಂದರು.
‘ಹೇಮಂತ್‌ಕುಮಾರ್ ಅವರೇ ಪತ್ರವನ್ನು ಸೃಷ್ಟಿಸಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ನಂತರ, ಆ ಪತ್ರವನ್ನೇ ಪೋಸ್ಟ್‌ಕಾರ್ಡ್ ಜಾಲತಾಣಕ್ಕೆ ನೀಡಿದ್ದರು. ಅದಾದ ನಂತರ, ಪತ್ರಿಕೆಯೊಂದು ಅದೇ ಪತ್ರವನ್ನು ಆಧರಿಸಿ ಸುದ್ದಿ ಪ್ರಕಟಿಸಿತ್ತು’ ಎಂದು ವಿವರಿಸಿದರು.
ಬಂಧನಕ್ಕೆ ಬಿಜೆಪಿ ಖಂಡನೆ
ಹೇಮಂತ್‌ಕುಮಾರ್ ಅವರನ್ನು ಬಂಧಿಸಿದ ಸಿಐಡಿ ಅಧಿಕಾರಿಗಳ ಕ್ರಮವನ್ನು ಬಿಜೆಪಿ ಖಂಡಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ಭೇಟಿಯಾದ ಬಿಜೆಪಿಯ ನಿಯೋಗ, ‘ಸಂಬಂಧವಿಲ್ಲದ ಪ್ರಕರಣದಲ್ಲಿ ಹೇಮಂತ್‌ಕುಮಾರ್ ಅವರನ್ನು ಬಂಧಿಸಲಾಗಿದೆ. ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.
ಶಾಸಕರಾದ ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ಎಸ್.ಸುರೇಶ್‌ಕುಮಾರ್ ನಿಯೋಗದಲ್ಲಿದ್ದರು.
ಸಿಐಡಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.