ಬೆಂಗಳೂರು: ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮನೆಯಿಂದ ಆಚೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ದುಷ್ಟ ಹಂತಕರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಕೊಲೆ, ದಾಂಧಲೆ, ದರೋಡೆ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
‘ಎಕ್ಸ್’ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಸಾಮಾಜಿಕ ಭದ್ರತೆ ಕಲ್ಪಿಸಿ ಜನರಿಗೆ ಅಭಯ ತುಂಬಬೇಕಾದ ಗೃಹ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡದ ಕಾರಣ ನಾಗರಿಕ ಸಮಾಜದ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
‘ಕರ್ನಾಟಕದಲ್ಲಿ ಹೆಣ್ಣು ಮಕ್ಕಳು 'ಕೊಲೆ ಭಾಗ್ಯ’ ಕಾಣುವಂತಾಗಿದೆ. ಸಾಮಾಜಿಕ ಭದ್ರತೆಗೆ ಹೆಸರಾಗಿದ್ದ ನಮ್ಮ ಹೆಮ್ಮೆಯ ಕರ್ನಾಟಕ ಕಾಂಗ್ರೆಸ್ ಆಡಳಿತದ ಒಂದು ವರ್ಷದಲ್ಲಿ ಕ್ರಿಮಿನಲ್, ಕೊಲೆಗಡುಕರ ತಾಣವನ್ನಾಗಿಸುತ್ತಿದೆ. ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಯೋಜನೆಗಳನ್ನು ಜಾರಿ ತಂದಿರುವುದಾಗಿ ಬೀಗುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಾಡುಹಗಲೇ ಅಮಾಯಕ ಹೆಣ್ಣು ಮಕ್ಕಳನ್ನು ಭೀಕರವಾಗಿ ಹತ್ಯೆಗೈಯ್ಯಲಾಗುತ್ತಿದೆ. ಮನೆಗಳಿಗೆ ನುಗ್ಗಿ ಗೃಹಲಕ್ಷ್ಮಿಯರನ್ನು ಚಾಕುವಿನಿಂದ ಇರಿದು ಕೊಲ್ಲಲಾಗುತ್ತಿದೆ. ಭಾಗ್ಯಲಕ್ಷ್ಮಿಯರನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಅರಣ್ಯರೋದನವಾಗುತ್ತಿದೆ. ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳು, ಅನುಮಾನದ ಸಾವುಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ’ ಎಂದು ಹೇಳಿದ್ದಾರೆ.
‘ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ನೇಹಾ, ಮಡಿಕೇರಿಯಲ್ಲಿ ಮೀನಾಳ ರುಂಡ ಕತ್ತರಿಸಿ ಕೊಲೆಗೈದ ಘಟನೆ, ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ, ಬೆಂಗಳೂರಿನ ಪದವಿ ವಿದ್ಯಾರ್ಥಿನಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದೂ ಸೇರಿ ನಿರಂತರ ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ’ ಎಂದು ವಿಜಯೇಂದ್ರ ತಿಳಿಸಿದ್ದಾರೆ.
‘ದುರ್ಬಲರು, ಅಬಲೆಯರು ಭರವಸೆ ಹೊತ್ತು ಧೈರ್ಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಾತಾವರಣ ಕಲ್ಪಿಸಲಾಗದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತದಿಂದ ದೇಶದಲ್ಲಿ ರಾಜ್ಯದ ಗೌರವ, ಘನತೆಗಳು ಕುಸಿದು ಬೀಳುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲಾಗದ ಸ್ಥಿತಿ ತಲುಪಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಥ ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರು ಸರಣಿ ಘಟನೆಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.