ಬೆಂಗಳೂರು: ಬರ ಪರಿಹಾರ ಬಿಡುಗಡೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್‌ಖಾನ್, ಕೃಷ್ಣ ಬೈರೇಗೌಡ ಅವರು ದೆಹಲಿಗೆ ಐಷಾರಾಮಿ ವಿಮಾನದಲ್ಲಿ ತೆರಳಿದ್ದನ್ನು ಬಿಜೆಪಿ ಟೀಕಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರು ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ‘ಯಾರದ್ದೊ ದುಡ್ಡು ಎಲ್ಲಮ್ಮನ ಜಾತ್ರೆ, ಜನರ ದುಡ್ಡು ಆಕಾಶದಲ್ಲಿ ಜಾತ್ರೆ’ ಎಂಬಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಶ್ರೀಮಂತಿಕೆಯ ದರ್ಪ ತೋರಿಸುತ್ತಿದ್ದು, ಮೋಜು, ಮಸ್ತಿಯೇ ತಮ್ಮ ಜೀವನ ಶೈಲಿ ಎಂದು ಪ್ರದರ್ಶಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನರ ತೆರಿಗೆ ಹಣವನ್ನು ವ್ಯಯಿಸಿ ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಾಗಿದೆ. ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ, ‘ರೋಮ್ ದೊರೆ ನೀರೋ’ ಉಲ್ಲೇಖಿಸುವ ಬದಲು ‘ರಾಜ್ಯ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ’ ಎಂದು ವರ್ಣಿಸಬಹುದಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.