ADVERTISEMENT

ಭಾಷೆ ಹೆಸರಿನಲ್ಲೂ ಸಿಎಂ ಸಿದ್ದರಾಮಯ್ಯ ರಾಜಕೀಯ: ಬಿ.ವೈ ವಿಜಯೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2024, 5:03 IST
Last Updated 12 ಫೆಬ್ರುವರಿ 2024, 5:03 IST
<div class="paragraphs"><p>ಬಿ.ವೈ. ವಿಜಯೇಂದ್ರ </p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಭಾಷೆ ಹೆಸರಿನಲ್ಲೂ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ದಿಢೀರ್‌ ಕಾಳಜಿ ತೋರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ, ಡಾ. ರಾಜ್‌ ಕುಮಾರ್‌ ಅವರ ನೇತೃತ್ವದ ಐತಿಹಾಸಿಕ ಗೋಕಾಕ್‌ ಚಳವಳಿಗೆ ಕಾರಣವಾದ ಸರ್ಕಾರ ಯಾವುದು ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಡಾ. ರಾಜ್‌ಕುಮಾರ್‌, ಸಾಹಿತಿಗಳು ಹಾಗೂ ಕಲಾವಿದರನ್ನು ಕನ್ನಡಕ್ಕಾಗಿ ಬೀದಿಗೆ ಇಳಿಸುವ ಪರಿಸ್ಥಿತಿ ತಂದದ್ದು ನಿಮ್ಮ ಕಾಂಗ್ರೆಸ್‌ ಸರ್ಕಾರ ಎಂಬ ಇತಿಹಾಸ ಮರೆತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಕನ್ನಡಕ್ಕೆ ಕಂಟಕರಾಗಿದ್ದು, ಕನ್ನಡಿಗರನ್ನು ತಾತ್ಸಾರವಾಗಿ ಕಂಡಿದ್ದು, ಕನ್ನಡ ನಾಮಫಲಕಕ್ಕಾಗಿ ಹೋರಾಡಿದ ಕನ್ನಡ ಹೋರಾಟಗಾರರನ್ನು ಜೈಲಿಗೆ ಕಳುಹಿಸಿದ್ದು ನೀವಲ್ಲವೇ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡು, ನುಡಿ ಮತ್ತು ಜನರ ಬಗೆಗಿನ ಕಾಳಜಿ ಕುರಿತು ನಿಮ್ಮ ಮೊಸಳೆ ಕಣ್ಣೀರಿನ ಕನ್ನಡ ಪ್ರೇಮದಿಂದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಹೇಳಿದ್ದಾರೆ.

‘ದೇಶದ ಇತಿಹಾಸದಲ್ಲಿ ಮಾತೃಭಾಷೆಗೆ ಮಾನ್ಯತೆ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ನೆಲದ ಭಾಷೆಗೆ ಆದ್ಯತೆ ನೀಡಲಾಗಿದೆಯೇ ಹೊರತು ಆಂಗ್ಲ ಭಾಷೆಗೆ ನೀಡಿಲ್ಲ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವ ಮೂಲಕ ನಮ್ಮ ಸಂಸ್ಕೃತಿ, ಭಾಷೆ ಮತ್ತು ನಮ್ಮತನವನ್ನು ವಿರೋಧಿಸುತ್ತಿರುವ ನೀವು ಕನ್ನಡ ಪ್ರೇಮಿಯಾಗಲು ಹೇಗೆ ಸಾಧ್ಯ’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಸ್ಥಳೀಯ ಭಾಷೆ, ಸಂಸ್ಕೃತಿ, ಆಚಾರ–ವಿಚಾರಗಳು ಉಳಿಯಬೇಕೆನ್ನುವ ಬದ್ಧತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಇದೆಯೇ ಹೊರತು. ನಿಮ್ಮ ರೀತಿ ಭಾಷೆ ಹೆಸರಿನಲ್ಲೂ ರಾಜಕೀಯ ಮಾಡುವ ಕುಬ್ಜತನ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.