ADVERTISEMENT

ಬಿಎಸ್‌ವೈ ವೇಗಕ್ಕೆ ಶಾ ಅಂಕುಶ? ‘ದೋಸ್ತಿ’ ಬಿದ್ದರೂ ಬಿಜೆಪಿಗೆ ಸಿಗದ ‘ಸಿಹಿ’

ಸರ್ಕಾರ ರಚನೆಗೆ ಹಸಿರು ನಿಶಾನೆ ತೋರದ ವರಿಷ್ಠರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 1:49 IST
Last Updated 25 ಜುಲೈ 2019, 1:49 IST
   

ನವದೆಹಲಿ/ಬೆಂಗಳೂರು: ‘ಗುರುವಾರವೇ ಮುಖ್ಯಮಂತ್ರಿಯಾಗುತ್ತೇನೆ’ ಎಂಬ ಉಮೇದಿನಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವೇಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಡಿವಾಣ ಹಾಕಿದ್ದಾರೆ.

‘ಸಭಾಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್‌ ಎದುರು ಬಾಕಿ ಇರುವ ಕಾಂಗ್ರೆಸ್‌–ಜೆಡಿಎಸ್‌ನ 15 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳು ಇತ್ಯರ್ಥ ಆಗುವವರೆಗೆ ಸರ್ಕಾರ ರಚನೆಗೆ ಅವಸರ ಮಾಡಬೇಡಿ ಎಂದು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸರ್ಕಾರ ರಚನೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಬುಧವಾರ ಮಧ್ಯಾಹ್ನ ನವದೆಹಲಿಗೆ ಪ್ರಯಾಣ ಬೆಳೆಸುವುದಾಗಿ ಯಡಿಯೂರಪ್ಪ ಹೇಳಿದ್ದರು. ‘ನಾವು ಸೂಚಿಸುವವರೆಗೂ ನೀವು ಬರುವುದು ಬೇಡ’ ಎಂಬ ಸಂದೇಶವನ್ನು ಶಾ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾ ಅವರನ್ನು ಭೇಟಿ ಮಾಡಿ ಬಂದ ನಂತರವಷ್ಟೇ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕುಮಂಡಿಸುವ ಇರಾದೆ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಹೈಕಮಾಂಡ್‌ ನಿರಾಸಕ್ತಿ ತಾಳಿದ್ದರಿಂದ ಅವರು ದೆಹಲಿ ಭೇಟಿ ಕಾರ್ಯಕ್ರಮ ರದ್ದುಪಡಿಸಿದರು.

ಮುಖಭಂಗ ಆತಂಕ: 2018ರ ವಿಧಾನಸಭೆ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅನ್ಯ ಪಕ್ಷದ ಶಾಸಕರನ್ನು ಸೆಳೆದು ಅಥವಾ ಜೆಡಿಎಸ್‌ ಬೆಂಬಲ ಪಡೆದು ಮುಖ್ಯಮಂತ್ರಿಯಾಗಬಹುದು ಎಂಬ ವಿಶ್ವಾಸದಲ್ಲಿದ್ದ ಯಡಿಯೂರಪ್ಪ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಆದರೆ, ಕಾಂಗ್ರೆಸ್–ಜೆಡಿಎಸ್‌ ಒಟ್ಟಾಗಿ ನಿಂತು ಮೈತ್ರಿ ಸರ್ಕಾರ ರಚಿಸುವ ತಯಾರಿ ನಡೆಸಿದರು. ಇದರಿಂದಾಗಿ, ಬಹುಮತ ಸಾಬೀತುಪಡಿಸಲು ಅಸಾಧ್ಯವೆಂದರಿತ ಯಡಿಯೂರಪ್ಪ, ವಿದಾಯ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಡೆದಿದ್ದರು. ಇದರಿಂದ ಇಡೀ ದೇಶದಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು.

ಈಗಲೂ ಅಂತಹದೇ ಪರಿಸ್ಥಿತಿ ಸೃಷ್ಟಿಯಾಗಿದೆ.15 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾದಲ್ಲಿ 224 ಸದಸ್ಯ ಬಲದ ವಿಧಾನಸಭೆಯ ಸದಸ್ಯರ ಸಂಖ್ಯೆ 209ಕ್ಕೆ ಇಳಿಯಲಿದೆ. ಆಗ, ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತದ ಸಂಖ್ಯೆ 105 ಆಗಿರಲಿದೆ. ಬಿಜೆಪಿಗೆ ಇಬ್ಬರು ಪಕ್ಷೇತರರು ಬೆಂಬಲ ನೀಡಿದರೆ, ಬಹುಮತ ಸಾಬೀತು ಸಲೀಸು. ‘ಅತೃಪ್ತ’ರ ಪ್ರಕರಣ ಇತ್ಯರ್ಥವಾಗದೇ ಇದ್ದರೆ, ಅವರ ಪೈಕಿ ಕೆಲವರು ಕಾಂಗ್ರೆಸ್‌ ಜತೆಗೆ ಕೈ ಜೋಡಿಸಬಹುದು. ಆಗ ಬಹುಮತ ನಿರ್ಣಯಕ್ಕೆ ಸೋಲಾಗಿ, ಮತ್ತೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಆತಂಕ ಬಿಜೆಪಿ ವರಿಷ್ಠರದ್ದಾಗಿದೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರಪತಿ ಆಡಳಿತ: ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥ ಆಗದಿದ್ದರೆ ರಾಜ್ಯದಲ್ಲಿ ಕೆಲಕಾಲ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆಯೂ ಚಿಂತನೆ ನಡೆದಿದೆ. ಮಧ್ಯಂತರ ಚುನಾವಣೆಗೆ ಹೋಗುವ ಆಸಕ್ತಿ ವರಿಷ್ಠರಿಗಿಲ್ಲ. ಬದಲಿಗೆ ಒಂದೆರಡು ತಿಂಗಳ ನಂತರ ಯಡಿಯೂರಪ್ಪ ನೇತೃತ್ವದಲ್ಲೇ ಸರ್ಕಾರ ರಚಿಸುವ ಬಗ್ಗೆ ಆಲೋಚನೆ ಇದೆ.

ಬಿಎಸ್‌ವೈ ಕಟ್ಟಿಹಾಕಲು ‘ಕೈ’ ತಂತ್ರ

ಮೈತ್ರಿ ಸರ್ಕಾರ ಪತನಗೊಳಿಸಿ ಬೀಗುತ್ತಿರುವ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ನಾಯಕರು ರಣತಂತ್ರ ಹೆಣೆದಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸಬೇಕಾದರೆ 224 ಸದಸ್ಯಬಲದ ವಿಧಾನಸಭೆಯಲ್ಲಿ 113 ಸದಸ್ಯರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂಬ ಪಟ್ಟಿಯನ್ನು ರಾಜ್ಯಪಾಲರಿಗೆ ಕೊಡಬೇಕು. 15 ಶಾಸಕರ ರಾಜೀನಾಮೆ ಇತ್ಯರ್ಥವಾಗದೇ ಇರುವುದರಿಂದ ಸದನದ ಒಟ್ಟು ಬಲ ಕಡಿಮೆಯಾಗಿಲ್ಲ. ಹೀಗಿರುವಾಗ ತಮಗೆ 105 ಶಾಸಕರ ಬಲ ಇದೆ ಎಂದು ಸರ್ಕಾರ ರಚನೆಗೆ ಮುಂದಾಗುವುದು ಅಸಾಧ್ಯ. ಈ ಅಸ್ತ್ರ ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ನಾಯಕರು, ಶಾಸಕರನ್ನು ಅನರ್ಹಗೊಳಿಸುವ ಅಥವಾ ರಾಜೀನಾಮೆ ಅಂಗೀಕರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಸಭಾಧ್ಯಕ್ಷರ ಮೇಲೆ ಒತ್ತಡ ಹಾಕುವ ದಾರಿ ಹಿಡಿಯಲು ಮುಂದಾಗಿದ್ದಾರೆ. ಹೀಗೆ, ಬಿಜೆಪಿ ಸರ್ಕಾರ ತಕ್ಷಣ ಅಸ್ತಿತ್ವಕ್ಕೆ ಬರದಂತೆ ತಡೆಯುವುದು ಕೈ ನಾಯಕರ ಆಲೋಚನೆ.

ಏನು ಬೇಕಾದರೂ ಆಗಬಹುದು’

ರಾಜ್ಯದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬೆಳವಣಿಗೆಗಳು ನಡೆಯಲಿದ್ದು, ರಾಜಕೀಯ ಅಸ್ಥಿರತೆ ಮತ್ತಷ್ಟು ಕಾಡಲಿದೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಬುಧವಾರ ಹೇಳಿದರು.

ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂದಿನ ದಿನಗಳಲ್ಲೂ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. ಈಗಿನ ಬೆಳವಣಿಗೆ ಗಮನಿಸಿದರೆ, ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ನೋಡಿದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಮುಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುಳಿವು ನೀಡಿದರು.

‘ತಮ್ಮ ಅಧಿಕಾರ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಮುಂಬರುವ ಸರ್ಕಾರಕ್ಕೂ ರಾಜಕೀಯ ಅಸ್ಥಿರತೆ ಕಾಡಲಿದೆ’ ಎಂದು ಹೇಳಿದರು.

***

ವರಿಷ್ಠರಿಂದ ಸೂಚನೆ ಬರುವವರೆಗೆ ಕಾಯುತ್ತೇವೆ. ಆ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೇವೆ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.