ADVERTISEMENT

ಚುನಾವಣೆ ವಿಶ್ಲೇಷಣೆ | ನೆರೆ ಸಂತ್ರಸ್ತ ಕೊಲ್ಹಾಪುರ ಜಿಲ್ಲೆಯಲ್ಲಿ ಬಿಜೆಪಿ ವಿಫಲ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 9:31 IST
Last Updated 25 ಅಕ್ಟೋಬರ್ 2019, 9:31 IST
ಕೊಲ್ಹಾಪುರ ನಗರಕ್ಕೆ ನುಗ್ಗಿರುವ ಪಂಚಗಂಗಾ ನದಿಯ ನೀರು (ಸಂಗ್ರಹ ಚಿತ್ರ).
ಕೊಲ್ಹಾಪುರ ನಗರಕ್ಕೆ ನುಗ್ಗಿರುವ ಪಂಚಗಂಗಾ ನದಿಯ ನೀರು (ಸಂಗ್ರಹ ಚಿತ್ರ).   

ಬೆಂಗಳೂರು: ಕಳೆದ ಆಗಸ್ಟ್‌ನಲ್ಲಿ ಅತಿವೃಷ್ಟಿ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿದ್ದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯೂ ಸೇರಿದಂತೆವಿವಿಧೆಡೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.

ಕೊಲ್ಹಾಪುರ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 4, ಪಕ್ಷೇತರರು 2, ಎನ್‌ಸಿಪಿ 2, ಶಿವಸೇನೆ ಮತ್ತು ಜನಸುರಾಜ್ಯ ಪಕ್ಷಗಳು ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿದ್ದವು. ಬಿಜೆಪಿಯ ಪ್ರಬಲ ನೆಲೆ ಎನ್ನಲಾದ, ಕರ್ನಾಟಕದ ‘ನೆರೆ’ಯ ಜಿಲ್ಲೆಯಲ್ಲಿ ಆಗಿರುವ ಈ ಹಿನ್ನಡೆ ಕರ್ನಾಟಕದ ಬಿಜೆಪಿ ನಾಯಕರಿಗೂಆತ್ಮಾವಲೋಕನದ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.

ಲೋಕಸಭೆ ಚುನಾವಣೆ ಸಂದರ್ಭ ಈ ಪ್ರದೇಶದಲ್ಲಿನರೇಂದ್ರ ಮೋದಿ ಅಲೆ ಪ್ರಬಲವಾಗಿತ್ತು. ಜನರೂ ಬಿಜೆಪಿ ಅಭ್ಯರ್ಥಿಗಳನ್ನು ಉತ್ಸಾಹದಿಂದ ಬೆಂಬಲಿಸಿದ್ದರು. ಆದರೆ ಆಗಸ್ಟ್‌ ನಂತರ ಈ ಮನಃಸ್ಥಿತಿ ಬದಲಾಯಿತು.

ADVERTISEMENT

ತಾವು ನೆಚ್ಚಿಕೊಂಡಿದ್ದ, ಬೆಂಬಲಿಸಿದ ನಾಯಕರು ಮತ್ತು ಪಕ್ಷ ತಮ್ಮ ಸಂಕಷ್ಟ ಪರಿಸ್ಥಿತಿಯಲ್ಲಿ ಸ್ಪಂದಿಸಲಿಲ್ಲ ಎನ್ನುವ ಸಿಟ್ಟು ಎಲ್ಲೆಡೆ ಕಂಡುಬರುತ್ತಿತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಬಿಜೆಪಿ ನಾಯಕರಿಗೆ ಈ ಬೆಳವಣಿಗೆ ಆತಂಕ ತಂದೊಡ್ಡಿದೆ.ಡಿಸೆಂಬರ್‌ನಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿರುವ 15 ಸ್ಥಾನಗಳ ಉಪಚುನಾವಣೆಯಲ್ಲಿ ಜನರ ಬೆಂಬಲ ಸಾರಾಸಗಟಾಗಿ ದೊರೆಯಲಾರದು ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಜನರ ಬೆಂಬಲ ಸಿಗುವುದು ಕಷ್ಟ, ಮಹಾರಾಷ್ಟ್ರ ಫಲಿತಾಂಶದ ಪ್ರಭಾವದಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರಿಗೆ ವಸತಿಗೆ ಅನುಕೂಲ ಮಾಡಿಕೊಡುವ ಭರವಸೆಯನ್ನುರಾಜ್ಯದ ಬಿಜೆಪಿ ಸರ್ಕಾರ ಈವರೆಗೂ ಈಡೇರಿಸಿಲ್ಲ. ಪರಿಹಾರ ಕಾರ್ಯಗಳಿಗೆಕೇಂದ್ರ ಸರ್ಕಾರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ದೊರೆಯುತ್ತಿಲ್ಲ. ಈ ಅಂಶಗಳು ಬಿಜೆಪಿಗೆ ಪ್ರತಿಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.