ಮಂಡ್ಯ: 'ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಕೋಮುವಾದಕ್ಕೆ ಆದ್ಯತೆ ನೀಡಿರುವುದನ್ನು ಬಿಟ್ಟರೆ, ಮಂಡ್ಯ, ಮೈಸೂರು ಭಾಗದ ಅಭಿವೃದ್ಧಿಗೆ ಕಾಂಗ್ರೆಸ್, ಜೆಡಿಎಸ್ ಏನೇನೂ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಅಧಿಕಾರ ನೀಡಿ ಮತ್ತೆ ಡಬಲ್ ಎಂಜಿನ್ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಿ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು. ಆ ಮೂಲಕ ಎರಡೂ ಪಕ್ಷಗಳ ವಿರುದ್ಧಶುಕ್ರವಾರ ಚುನಾವಣೆಯ ರಣಕಹಳೆ ಮೊಳಗಿಸಿದರು.
ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರದ ಬಿಜೆಪಿ ಶಾಸಕರು, ಮುಖಂಡರು, ಈ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ‘ಯುದ್ಧೋನ್ಮಾದ’ದ ಕ್ಷಣಗಳಿಗೆ ಸಾಕ್ಷಿಯಾದರು.
ಮಂದಿರ ನಿರ್ಮಾಣ: ಬಿಜೆಪಿಯು ಬರಲಿರುವ ಚುನಾವಣೆಯನ್ನು ಕೋಮುಗಳ ನೆಲೆಯಲ್ಲಿ ನಡೆಸಲಿದೆ’ ಎಂಬ ಸ್ಪಷ್ಟ ಸೂಚನೆಯೂ ಇದೇ ಸಂದರ್ಭದಲ್ಲಿ ಹೊರಬಿತ್ತು.
‘ರಾಮ ಮಂದಿರ ನಿಮಗೆ ಬೇಕೋ ಬೇಡವೋ? ಬಾಬರ್ ಕಾಲದಿಂದಲೂ ರಾಮಮಂದಿರ ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಈಗ ನಾವು ನಿರ್ಮಿಸುತ್ತಿದ್ದೇವೆ. 2024ರ ಜನವರಿ 1ರಂದು ಮಂದಿರ ಉದ್ಘಾಟನೆಯಾಗಲಿದೆ. ಬರಲಿರುವವರು ಈಗಲೇ ಪ್ರಯಾಣದ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳಿ’ ಎಂದು ಅಚ್ಚರಿ ಮೂಡಿಸಿದರು. ‘ಕೇದಾರನಾಥ, ಬದರಿನಾಥ ಮತ್ತು ಕಾಶಿ ಕ್ಷೇತ್ರದ ಅಭಿವೃದ್ಧಿಗೂ ಮೋದಿ ಆದ್ಯತೆ ನೀಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರಾಜ್ಯದ 50 ಲಕ್ಷ ರೈತರ ಬ್ಯಾಂಕ್ ಖಾತೆಗೆ ತಲಾ ₹ 10 ಸಾವಿರ ಸಂದಾಯ ಮಾಡಲಾಗಿದೆ’ ಎಂದರು.
ಮಧ್ಯ ಕರ್ನಾಟಕದಲ್ಲಿ ಪ್ರಬಲವಾಗಿರುವ ಕಾಂಗ್ರೆಸ್- ಜೆಡಿಎಸ್ ಅನ್ನು ಭಾಷಣದುದ್ದಕ್ಕೂ ಕಟುವಾಗಿ ಟೀಕಿಸಿ ಕಾರ್ಯಕರ್ತರನ್ನು ಅವರು ಉದ್ದೀಪಿಸಿದರು. ‘ಎರಡು ಪಕ್ಷಗಳು ಭ್ರಷ್ಟಾಚಾರ, ಜಾತೀ ಯತೆ, ಕೋಮುವಾದ ಬೆಂಬಲಿಸಿವೆ. ಕ್ರಿಮಿನಲ್‌ಗಳಿಗೆ ಆಶ್ರಯ ನೀಡಿವೆ. ದಲಿತರು, ಬಡವರು, ಆದಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ’ ಎಂದು ಶಾ ದೂರಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳ ಪಟ್ಟಿಯನ್ನು ನೀಡಿದರು.
‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ದೆಹಲಿಯ ಎಟಿಎಂ ಆಗಲಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಎಟಿಎಂ ಆಗಲಿದೆ. ರಾಜ್ಯವನ್ನು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು, ಮಂಡ್ಯದಿಂದಲೇ ಬಿಜೆಪಿ ವಿಜಯಯಾತ್ರೆ ಆರಂಭವಾಗಲು, ಪ್ರಧಾನಿಯವರ ಕೈಗಳನ್ನು ಬಲಪಡಿಸಿ’ ಎಂದು ಕೋರಿದರು. ‘ಹಳೇ ಮೈಸೂರು ಮತ್ತು ದೇಶದ ಅಭಿವೃದ್ಧಿ ಒಟ್ಟಿಗೇ ಸಾಗಲಿದೆ’ ಎಂದು ಪ್ರತಿಪಾದಿಸಿದರು.
‘ಪ್ರಧಾನಿ, ಲಸಿಕೆ ದೊರಕಿಸಿ ದೇಶ ವನ್ನು ಕೋವಿಡ್ ಭೀತಿಯಿಂದ ಮುಕ್ತಗೊಳಿಸಿದ್ದಾರೆ. ಮಂಡ್ಯ-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ, ರೈಲು ಹಳಿಗಳ ವಿಸ್ತರಣೆ, ವಿದ್ಯುದೀಕರಣದ ಜೊತೆಗೆ ಮೈಷುಗರ್ ಕಾರ್ಖಾನೆಗೂ ಬಿಜೆಪಿ ಸರ್ಕಾರ ಚಾಲನೆ ನೀಡಿದೆ’ ಎಂದರು.
ಅವರಿಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ದಕ್ಷಿಣ ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್‌ನಿಂದ ಬೇಸತ್ತಿದ್ದಾರೆ’ ಎಂದೇ ಮಾತು ಶುರು ಮಾಡಿದರು. ‘ಈ ಭಾಗದ ನೀರಾವರಿ ಸಮಸ್ಯೆಗಳನ್ನು ಎರಡೂ ಪಕ್ಷಗಳು ನಿರ್ಲಕ್ಷಿಸಿವೆ. ಮುಖ್ಯಮಂತ್ರಿ, ಮಂತ್ರಿಗಳಾಗಿದ್ದವರು ಜನತೆಗೆ ನ್ಯಾಯ ಒದಗಿಸಿಲ್ಲ. ನಾಲೆಗಳ ಆಧುನೀಕರಣ, ಕಡೆಭಾಗದ ರೈತರಿಗೆ ನೀರು ಪೂರೈಸಲು ನಿರ್ಲಕ್ಷ್ಯ ವಹಿಸಲಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಸುವರ್ಣ ಕರ್ನಾಟಕ ನಿರ್ಮಿಸುವ ಸಂಕಲ್ಪಕ್ಕೆ ಕೈಜೋಡಿಸಬೇಕು’ ಎಂದರು.
‘ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಗುಜರಾತಿನಲ್ಲಿ ದಾಖಲೆ ಗೆಲುವು ದೊರೆತಂತೆಯೇ ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಕೆ.ಗೋಪಾಲಯ್ಯ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಸಿ.ನಾರಾ ಯಣ ಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದರು.
ಹರಿದು ಬಂದ ಜನಸಾಗರ
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ಸಾವಿರಾರು ಜನರು ಸಮಾವೇಶಕ್ಕೆ ಬಂದಿದ್ದರು. ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಬಸ್‌ಗಳು ಬಂದಿದ್ದವು. ಅಮಿತ್ ಶಾ ತೆರಳುವವರೆಗೂ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.