ADVERTISEMENT

‌ಚುನಾವಣೆ: BJP ಟಿಕೆಟ್‌ ಕೊಡಿಸುವುದಾಗಿ ಹೇಳಿ ಪ್ರಲ್ಹಾದ ಜೋಶಿ ಹೆಸರಿನಲ್ಲಿ ವಂಚನೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ಧ ಬಸವೇಶ್ವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 17:27 IST
Last Updated 17 ಅಕ್ಟೋಬರ್ 2024, 17:27 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್‌ ಸಿಂಗ್ ಚವ್ಹಾಣ್‌ ಅವರಿಂದ ₹2 ಕೋಟಿ ಸುಲಿಗೆ ಮಾಡಿದ್ದ ಆರೋಪದ ಅಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ಧ ಬಸವೇಶ್ವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಗೋಪಾಲ ಜೋಶಿ, ವಿಜಯಲಕ್ಷ್ಮಿ ಜೋಶಿ ಹಾಗೂ ಅಜಯ್‌ ಜೋಶಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುನಿತಾ ಚವ್ಹಾಣ್‌ ಅವರು ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ದೇವಾನಂದ್ ಫೂಲ್ ಸಿಂಗ್ ಚವ್ಹಾಣ್‌ ಅವರು 2018ರಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಪಡೆದು ಜಯಗಳಿಸಿದ್ದರು. 2023ರ ಚುನಾವಣೆಯಲ್ಲಿ ಸೋತಿದ್ದರು. ನಂತರ, ಲೋಕಸಭೆ ಚುನಾವಣೆ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಅಥಣಿ ಎಂಜಿನಿಯರ್ ಶೇಖರ್ ನಾಯಕ್ ಎಂಬುವವರು ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರ ಪರಿಚಯ ಇರುವುದಾಗಿ ಹೇಳಿದ್ದರು. ಜತೆಗೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಮಾಹಿತಿ ನೀಡಿದ್ದರು. ಹುಬ್ಬಳ್ಳಿಯ ಮನೆಗೆ ಕರೆದೊಯ್ದು ಗೋಪಾಲ್ ಜೋಶಿ ಅವರನ್ನು ಭೇಟಿ ಮಾಡಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ ಜೋಶಿ ಅವರ ವರ್ಚಸ್ಸು ತುಂಬಾ ಚೆನ್ನಾಗಿದೆ. ಅವರು ಹೇಳಿದಂತೆ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಕೇಳುತ್ತಾರೆ. ನನ್ನ ತಮ್ಮನ ಜತೆಗೆ ಮಾತನಾಡಿ, ನಿಮಗೆ ವಿಜಯಪುರ ಕ್ಷೇತ್ರಕ್ಕೆ ಬಿಜೆಪಿಯ ಟಿಕಟ್‌ ಕೊಡಿಸುತ್ತೇನೆ ಎಂದು ಗೋಪಾಲ್ ಜೋಶಿ ಭರವಸೆ ನೀಡಿದ್ದರು. ₹5 ಕೋಟಿ ಬೇಡಿಕೆ ಇಟ್ಟಿದ್ದರು. ಅಷ್ಟು ಹಣವಿಲ್ಲ ಎಂದಾಗ ₹25 ಲಕ್ಷ ಕೇಳಿದ್ದರು. ಚೆಕ್ ಸಹ ಪಡೆದಿದ್ದರು. ಆ ಹಣವನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿ ಇರುವ ವಿಜಯಲಕ್ಷ್ಮಿ ಅವರ ಮನೆಗೆ ತಲುಪಿಸಲಾಗಿತ್ತು. ನಂತರ, ಅಮಿತ್ ಶಾ ಅವರ ಆಪ್ತ ಸಹಾಯಕರ ಜತೆಗೆ ಮಾತನಾಡಿರುವುದಾಗಿ ಹೇಳಿದ್ದರು. ನಂತರ, ಟಿಕೆಟ್‌ ಕೊಡಿಸದೇ ಮೋಸ ಮಾಡಿದ್ದಾರೆ’ ಎಂದು ದೂರು ನೀಡಲಾಗಿದೆ.

ನಂತರದ ದಿನಗಳಲ್ಲಿ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ₹ 1.75 ಕೋಟಿ ಪಡೆದುಕೊಂಡಿದ್ದರು ಎಂಬುದಾಗಿ ದೂರು ನೀಡಲಾಗಿದ್ದು, ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.