ADVERTISEMENT

ಬಿರುಗಾಳಿ ತಡೆಗೆ ಬಿಜೆಪಿ ಯತ್ನ: ಶಾಸಕರ ಹಿಡಿದಿಡಲು ಅಖಾಡಕ್ಕೆ ಬಿಎಸ್‌ವೈ,ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 23:47 IST
Last Updated 18 ಆಗಸ್ಟ್ 2023, 23:47 IST
   

ಬೆಂಗಳೂರು: ಕೆಲವು ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ಬಿಜೆಪಿಯನ್ನು ತಲ್ಲಣಕ್ಕೆ ದೂಡಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅಖಾಡಕ್ಕೆ ಇಳಿದ ಆ ಪಕ್ಷದ ನಾಯಕರು, ಅವರ ಅಹವಾಲು ಆಲಿಸುವ ಯತ್ನ ಮಾಡಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ  ಸೇರಿದಂತೆ ಬೆಂಗಳೂರಿನ ಹಲವು ಶಾಸಕರು ಭಾಗವಹಿಸಿದ್ದರು. ಆದರೆ, ಪಕ್ಷದಿಂದ ಹೊರಗಿಟ್ಟಂತೆ ತೋರುತ್ತಿರುವ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್ ಹಾಗೂ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ ಸಭೆಯಲ್ಲಿ ಭಾಗಿಯಾಗಿರಲಿಲ್ಲ. 

ಶಾಸಕರ ಜತೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ, ಯಾರೊಬ್ಬರೂ ‘ಆಪರೇಷನ್‌ ಹಸ್ತ’ ಕ್ಕೆ ಸಿಲುಕಬೇಡಿ ಎಂದು ಸೂಚನೆ ನೀಡಿದರು.

ADVERTISEMENT

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು, ಮುನಿರತ್ನ, ಶಿವರಾಂ ಹೆಬ್ಬಾರ್‌ ಹಾಗೂ ಜೆಡಿಎಸ್‌ನಲ್ಲಿದ್ದ ಕೆ. ಗೋಪಾಲಯ್ಯ ಅವರು, ಬಿಜೆಪಿ ಸೇರಿ ಸಚಿವರಾಗಿದ್ದರು. ಇವರ ಪೈಕಿ ಬಹುತೇಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದು, ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದನ್ನು ವದಂತಿ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಅವರು ಇದಕ್ಕೆ ಪುಷ್ಟಿ ನೀಡುವ ಮತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ರೀತಿಯ ಹೇಳಿಕೆಗಳನ್ನು ನೀಡಲಾರಂಭಿದ್ದಾರೆ.

ಯಡಿಯೂರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಗೋಪಾಲಯ್ಯ, ತಾವು ಕಾಂಗ್ರೆಸ್ ಸೇರುವುದಿಲ್ಲ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದನ್ನು ನಂಬಬಾರದು ಎಂದು ಮನವಿ ಮಾಡಿದರು.

ಮುನಿರತ್ನ ಮಾತನಾಡಿ,’ ಬೈರತಿ ಬಸವರಾಜು ಅವರೂ ನನಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್ ಸೇರುವುದಿಲ್ಲ. ಇದನ್ನು ಮಾಧ್ಯಮಗಳಿಗೆ ಹೇಳುವಂತೆಯೂ ಮನವಿ ಮಾಡಿದ್ದರು. ಕಾಂಗ್ರೆಸ್‌ನಿಂದ ಬಂದಿರುವ ನಾವು ಮತ್ತೆ ಆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ’ ಎಂದರು.

ಸೋಮಶೇಖರ್‌ ವರಸೆ ಏನು?:

ಎಸ್‌.ಟಿ.ಸೋಮಶೇಖರ್‌ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ, ‘ಬಿಜೆಪಿಯ ಸ್ಥಳೀಯ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ನನಗೆ ತೊಂದರೆ ನೀಡಿದ್ದರು. ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು. ನಾನು ಹೋಗುವುದಿಲ್ಲ ಎಂದರೂ ಬಿಜೆಪಿಯವರೇ ನನ್ನನ್ನು ಪಕ್ಷದಿಂದ ಕಳುಹಿಸಲು ಸಿದ್ದರಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿ ಗುರುವಾರ ರಾತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬಗ್ಗೆ ದೂರು ನೀಡಿದರು ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಹಸ್ತ:

ಲೋಕಸಭಾ ಚುನಾವಣೆಗೆ  ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ ಅದಕ್ಕೆ ಪೂರಕವಾಗಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಕೆಲವು ಶಾಸಕರನ್ನು ಸೆಳೆದು ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಂತ್ರ ರೂಪಿಸುತ್ತಿದೆ. ಕೆಲವು ಶಾಸಕರನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ.

ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು, ಶಿವರಾಂ ಹೆಬ್ಬಾರ್, ಗೋಪಾಲಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ  ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್  ಅವರ ಸಹಮತವಿದೆ. ಅದೇ ರೀತಿ ಮುನಿರತ್ನ ಸೇರ್ಪಡೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಆಕ್ಷೇಪವಿದೆ ಎನ್ನಲಾಗಿದೆ.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಜಯಪ್ರಕಾಶ್‌ ಹೆಗ್ಡೆ ಕೂಡ ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದು, ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

10–15 ಶಾಸಕರು ಬರ್ತಾರೆ:

‘10 ರಿಂದ 15 ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್‌ ಸೇರಲು ಸಿದ್ಧರಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ.  ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಯಾರೆಲ್ಲ ಬರಲಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬರುವುದು ಖಚಿತ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಯಚೂರಿನಲ್ಲಿ ಮಾತನಾಡಿರುವ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬೇರೆ ಪಕ್ಷಗಳ ಹಾಲಿ, ಮಾಜಿ ಶಾಸಕರು ಹಾಗೂ ಮುಂಬೈ ಕರ್ನಾಟಕದ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ.

‘ಏನು ಬೇಕಾದರೂ ಆಗಬಹುದು’

ಬೆಂಗಳೂರು: ‘ಬಿಜೆಪಿ, ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನು ನಿಮ್ಮಿಂದಲೇ ಕೇಳುತ್ತಿದ್ದೇನೆ. ಆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಪಕ್ಷದ ಮತ ಗಳಿಕೆ ಪ್ರಮಾಣ ಹೆಚ್ಚಿಸಬೇಕಿದೆ. ಅದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರನ್ನು ಸೇರಿಸಿ
ಕೊಳ್ಳುವಂತೆ ಸೂಚಿಸಿದ್ದೇನೆ. ಉಳಿದಂತೆ ಬೇರೆ ಯಾರದ್ದೇ ಪಕ್ಷ ಸೇರ್ಪಡೆ ವಿಚಾರ ನನಗೆ ತಿಳಿದಿಲ್ಲ’ ಎಂದರು.

‘ನಮಗೆ 135 ಶಾಸಕರ ಬಲ ಇದೆ. ಹೀಗಾಗಿ ಬೇರೆಯವರ ಜತೆ ಮಾತನಾಡುವ ಅಗತ್ಯ ಉದ್ಭವಿಸಿಲ್ಲ. ಎಲ್ಲ ಶಾಸಕರೂ ನನಗೆ ಪರಿಚಿತರು. ಬಿಜೆಪಿಯವರು ಯಾರ ಜತೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ನೀವು ಏಕೆ ಚರ್ಚೆ ಮಾಡುತ್ತಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ’ ಎಂದು ಹೇಳಿದರು.

‘ಯಾರೂ ಬಿಜೆಪಿ ಬಿಡುವುದಿಲ್ಲ’

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯ ವಿರುದ್ಧ ಕೇಳಿ ಬರುತ್ತಿರುವ ಆರೋಪದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಶಾಸಕರ ಪಕ್ಷಾಂತರದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಎಸ್‌.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್ ಜತೆ ಮಾತನಾಡಿದ್ದೇನೆ. ಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಶಾಸಕರು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರ, ಸ್ವಜನ
ಪಕ್ಷಪಾತದ ವಿರುದ್ಧ ಅವರ ಶಾಸಕರೇ ದಂಗೆ ಎದ್ದಿರುವುದನ್ನು ಮರೆ ಮಾಚಲು ಪಕ್ಷಾಂತರದ ಸುಳ್ಳು ಕತೆ ಕಟ್ಟುತ್ತಿದ್ದಾರೆ’ ಎಂದರು.

ನನ್ನನ್ನು ಸೋಲಿಸಲು ಯತ್ನಿಸಿದ್ದರು: ಶಿವರಾಂ ಹೆಬ್ಬಾರ್

‘ವಿಧಾನಸಭೆ ಚುನಾವಣೆ ವೇಳೆ ನನ್ನನ್ನು ಸೋಲಿಸಲು ಸ್ವಪಕ್ಷದ ಕೆಲ ಸ್ಥಳೀಯ ಮುಖಂಡರು ಪ್ರಯತ್ನಿಸಿದ್ದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಪಕ್ಷದ ಹಿರಿಯ ನಾಯಕರಿಗೆ ಪತ್ರ ಬರೆದಿರುವೆ. ಲೋಕಸಭೆ ಚುನಾವಣೆಗೆ ಇಂತಹ ತಪ್ಪು ಮರುಕಳಿಸಬಾರದೆಂದರೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪಕ್ಷದ ನಿರ್ಣಯಕ್ಕೆ ಕಾಯುತ್ತಿರುವೆ’ ಎಂದು ಶಾಸಕ ಶಿವರಾಂ ಹೆಬ್ಬಾರ್‌ ಹೇಳಿದರು.

‘ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ ಎಂದಿಗೂ ನೋವಾಗಿಲ್ಲ. ಅವರ ಮೇಲಿನ ವಿಶ್ವಾಸದಿಂದ ಬಿಜೆಪಿ ಸೇರಿದೆ. ಆದರೆ, ಸ್ಥಳೀಯ ಮುಖಂಡರು ನನ್ನ ಪರ ಕೆಲಸ ಮಾಡದಿರುವ ಬಗ್ಗೆ ನೋವಿದೆ. ರಾಜಕೀಯವಾಗಿ ಯಾವುದೇ ನಿರ್ಧಾರ ಸದ್ಯಕ್ಕೆ ಕೈಗೊಂಡಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದಿಲ್ಲ’ ಎಂದು ಅವರು  ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಗೋಪಾಲಯ್ಯ

‘ಬಿಜೆಪಿ ಸಿದ್ಧಾಂತ, ನಾಯಕರನ್ನು ನಂಬಿಯೇ ಪಕ್ಷ ಸೇರ್ಪಡೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ಪ್ರಮೇಯವೇ ಇಲ್ಲ. ಈಗ ಕೇಳಿ ಬರುತ್ತಿರುವ ಸುದ್ದಿಗಳು ಕೇವಲ ವದಂತಿ’ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.

‘ಈ ವದಂತಿಗಳನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಂಬಬಾರದು. ಕನಸಿನಲ್ಲೂ ಕಾಂಗ್ರೆಸ್‌ ಸೇರುವ ಯೋಚನೆ ಮಾಡಿಲ್ಲ. ಮಾಧ್ಯಮಗಳಲ್ಲಿ ಇಂತಹ ಹಸಿ ಸುಳ್ಳುಗಳು ಏಕೆ ಬರುತ್ತಿವೆ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಡುವುದಿಲ್ಲ. ಕಾರ್ಯಕರ್ತರು ಮತ್ತು ಮುಖಂಡರು ಗೊಂದಲಕ್ಕೆ ಒಳಗಾಗಬಾರದು’ ಎಂದೂ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.