ಮೈಸೂರು: ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮುಂದುವರಿಸಿದ್ದು, ಪಕ್ಷದ 50 ಶಾಸಕರಿಗೆ ತಲಾ ₹ 50 ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ಸೋಸಲೆ ಗ್ರಾಮದ ಬಳಿ ಬುಧವಾರ ₹ 470 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
'ಬಿಜೆಪಿ ಎಂದೂ ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. ಹಿಂದೆ 17 ಶಾಸಕರಿಗೆ ತಲಾ ₹25 ಕೋಟಿಯಿಂದ ₹30 ಕೋಟಿಯಷ್ಟು ಕೊಟ್ಟು ಖರೀದಿ ಮಾಡಿದ್ದರು. ಈಗ ₹ 50 ಕೋಟಿ ಆಮಿಷ ಒಡ್ಡಿದ್ದಾರೆ. ಈ ಹಣ ಎಲ್ಲಿಂದ ಬರುತ್ತದೆ? ಬಿಜೆಪಿಯವರು ನೋಟು ಪ್ರಿಂಟ್ ಮಾಡಿದ್ದರಾ? ' ಎಂದು ಪ್ರಶ್ನಿಸಿದರು.
'ನಮ್ಮ ಶಾಸಕರು ಈ ಆಮಿಷಕ್ಕೆ ಒಪ್ಪದ ಕಾರಣ ನನ್ನ ಮೇಲೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ನನ್ನನ್ನು ಮುಟ್ಟಿದರೆ ಕರ್ನಾಟಕದ ಜನ ಸುಮ್ಮನೆ ಬಿಡುವುದಿಲ್ಲ' ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.