ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಶಾಸಕ ಜಿ.ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ‘ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳಿಗೆ ಬಿಜೆಪಿಯು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ’ ಎಂದು ವ್ಯಂಗ್ಯವಾಡಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ಆಘಾತಕಾರಿ ಸಂಗತಿಯೆಂದರೆ, ಮೋದಿ ಸರ್ಕಾರವು ಈಗ ಬಳ್ಳಾರಿ ಗ್ಯಾಂಗ್‌ನ ಹಿತೈಷಿ ಹಾಗೂ ರಕ್ಷಕ ಆಗಿ ಮಾರ್ಪಟ್ಟಿದೆ. ಜನಾರ್ದನ ರೆಡ್ಡಿ ಹಾಗೂ ಆಪ್ತರು ಗಣಿ ಅಕ್ರಮ ನಡೆಸುವ ಮೂಲಕ ಬಳ್ಳಾರಿಯ ಶ್ರೀಮಂತ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು. ಅಕ್ರಮ ಗಣಿಗಾರಿಕೆಯ 20 ಪ್ರಕರಣಗಳು ವಿಚಾರಣೆಯ ಹಂತದಲ್ಲಿರುವಾಗಲೇ ರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಭ್ರಷ್ಟರಿಗೆ ರಕ್ಷಣೆ ನೀಡಲು ಮುಂದಾಗಿದೆ’ ಎಂದು ದೂರಿದರು.
‘ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು 2011ರ ಜುಲೈ 27ರಂದು ನೀಡಿದ ವರದಿಯಿಂದಾಗಿ ಭಾರತದ ಅತಿ ದೊಡ್ಡ ಕಬ್ಬಿಣದ ಅದಿರು ಗಣಿಗಾರಿಕೆ ಹಗರಣ ಬೆಳಕಿಗೆ ಬಂದಿತ್ತು. ಇದು ಬಿ.ಎಸ್.ಯಡಿಯೂರಪ್ಪ– ರೆಡ್ಡಿ ಗ್ಯಾಂಗ್‌ನ ಅಪವಿತ್ರ ಮೈತ್ರಿಯನ್ನು ಬಯಲಿಗೆಳೆದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ 2011ರ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ₹35 ಸಾವಿರ ಕೋಟಿಯ ಹಗರಣದಲ್ಲಿ ರೆಡ್ಡಿ ಅವರನ್ನು ಏಳು ವರ್ಷಗಳಲ್ಲಿ ನಾಲ್ಕು ಸಲ ಬಂಧಿಸಲಾಗಿತ್ತು’ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ‘ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಕನಿಷ್ಠ ಸರ್ಕಾರ– ಗರಿಷ್ಠ ಲೂಟಿ ಹಾಗೂ ಬಿಜೆಪಿ ಸೇರುವ ಮೂಲಕ ಇ.ಡಿ.– ಐಟಿ ದಾಳಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ಕಮಲ ಪಾಳಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.