ಬೆಂಗಳೂರು: ‘ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಗೆ ಮಂಗಳವಾರ ಉತ್ತರ ನೀಡುವ ವೇಳೆ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸಿದ ಸಚಿವರು, ‘ಅವರು ರೈತರ ನಡುವಿನಿಂದ ಬಂದ ನಿಜವಾದ ನಾಯಕ’ ಎಂದರು.
ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ಹಾಗಿದ್ದಲ್ಲಿ ಯಡಿಯೂರಪ್ಪ ಅವರನ್ನೇಕೆ ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಿರಿ. ಐ.ಟಿ, ಇ.ಡಿ ದಾಳಿ ಮಾಡಿಸಿ ಬೆದಿರಿಸಿದಿರಿ’ ಎಂದು ಪ್ರಶ್ನಿಸಿದರು.
‘ಯಡಿಯೂರಪ್ಪ ಅವರನ್ನು ಯಾರೂ ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿಸಿಲ್ಲ. ಅವರಿಗೆ ಅತ್ಯಂತ ಹತ್ತಿರದವನಾಗಿ ಈ ಮಾತು ಹೇಳುವೆ. ‘ನನಗೆ ವಯಸ್ಸಾಯಿತು. ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ. ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದರು’ ಎಂದು ಮಾಧುಸ್ವಾಮಿ ಹೇಳಿದರು.
ರಾಜೀನಾಮೆ ಸಲ್ಲಿಸಿದ ಬಳಿಕ ಯಡಿಯೂರಪ್ಪ ಅವರನ್ನು ಕರೆಸಿಕೊಂಡ ಪ್ರಧಾನಿ ನರೇಂದ್ರ ಮೋದಿಯವರು ಹುದ್ದೆಯಲ್ಲಿ ಮುಂದುವರಿಯುವಂತೆ ಸಲಹೆ ಮಾಡಿದ್ದರು. ಆದರೆ, ಇವರು ಒಪ್ಪಲಿಲ್ಲ ಎಂದರು.
‘ಯಡಿಯೂರಪ್ಪ ಕಣ್ಣೀರು ಹಾಕಿದ್ದು ಏಕೆ’ ಎಂದು ಹರಿಪ್ರಸಾದ್ ಹಾಗೂ ಜೆಡಿಎಸ್‌ನ ಟಿ.ಎ. ಶರವಣ ಪ್ರಶ್ನಿಸಿದರು. ‘ಭಾವನಾತ್ಮವಾಗಿ ಹಾಗೆ ಹೇಳಿರಬಹುದು’ ಎಂದು ಮಾಧುಸ್ವಾಮಿ ಉತ್ತರಿಸಿದರು.
‘ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾದರೆ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಿಂಬಿಸಿ’ ಎಂದು ಶರವಣ ಕೆಣಕಿದರು.
‘ನೀವು ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಅವರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತೀರಾ’ ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.