ADVERTISEMENT

‘ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರ ಹಿಡಿಯದು’: ಸಿದ್ದರಾಮಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:32 IST
Last Updated 22 ಸೆಪ್ಟೆಂಬರ್ 2018, 19:32 IST
   

ಕೋಲಾರ: ‘ಕೋಮುವಾದಿ ಬಿಜೆಪಿ ಮುಖಂಡರು ವಾಮ ಮಾರ್ಗದ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ. ಆದರೆ, ಅವರ ಆಸೆ ಈಡೇರುವುದಿಲ್ಲ. ಸಮಿಶ್ರ ಸರ್ಕಾರ 5 ವರ್ಷ ಆಡಳಿತ ನಡೆಸುತ್ತದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮತದಾರರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಬಿಜೆಪಿಯನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ನ ಎಲ್ಲಾ 80 ಶಾಸಕರು ನಮ್ಮೊಂದಿಗೆ ಇದ್ದಾರೆ. ನಿರಂತರ ಸಂಪರ್ಕದಲ್ಲಿರುವ ಅವರು ಸರ್ಕಾರಕ್ಕೆ ಕಂಟಕ ತರುವುದಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರವಾಗುವುದಿಲ್ಲ. ಬಿಜೆಪಿ ಮುಖಂಡರು ಚುನಾವಣೆ ಘೋಷಣೆಯಾದ ದಿನದಿಂದಲೂ ಅಧಿಕಾರದ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರದ ಆಸೆಗೆ ನಮ್ಮ ಶಾಸಕರಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಅವರು ತಿಪ್ಪರಲಾಗ ಹಾಕಿದರೂ ಅಧಿಕಾರ ಹಿಡಿಯಲು ಆಗಲ್ಲ’ ಎಂದರು.

ADVERTISEMENT

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಬೆಂಕಿ ಹಚ್ಚುತ್ತದೆ. ನನ್ನ ಕೊನೆಯುಸಿರು ಇರುವವರೆಗೂ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುತ್ತೇನೆ. ಸಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ನನ್ನಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ. ಸಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾರತಮ್ಯ ಮಾಡದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಬೇಕು’ ಎಂದು ಹೇಳಿದರು.

ರಾಜಕೀಯ ಪ್ರೇರಿತ: ‘ದಂಗೆ ಏಳಲು ಕರೆ ನೀಡಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿಯವರ ಹೇಳಿಕೆ ಸಂಬಂಧ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ದೂರು ನೀಡಿರುವುದು ರಾಜಕೀಯ ಪ್ರೇರಿತ. ಕೇಂದ್ರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಜನರಿಂದ ಆಯ್ಕೆಯಾಗಿದ್ದು, ಕಾನೂನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಒಳ್ಳೆಯದು ಮಾಡದಿದ್ದರೆ ದೇವರೂ ಮೆಚ್ಚುವುದಿಲ್ಲ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ:‘ರಾವಣ ಶಿವಭಕ್ತನಾಗಿದ್ದ. ಆದರೂ, ತಪ್ಪು ಮಾಡಿದಾಗ ರಾಮನಿಂದ ಜೀವ ಕಳೆದುಕೊಳ್ಳಬೇಕಾಯಿತು. ಒಳ್ಳೆಯದು ಮಾಡದಿದ್ದರೆ ದೇವರೂ ಮೆಚ್ಚುವುದಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೆಲಸ ಮಾಡದೇ ದೇವಸ್ಥಾನಗಳಿಗೆ ಹೋದರೆ ಏನು ಪ್ರಯೋಜನ’ ಎಂದು ಸಂಸದ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹತಾಶರಾಗಿದ್ದಾರೆ. ಆದ್ದರಿಂದಲೇ ಜನರಿಗೆ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಿದ ಮೇಲೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಂಗ ದೋಷದಿಂದ ಮೂರ್ಖರಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.