ಬೀದರ್: ‘ರಾಜ್ಯ ಬಿಜೆಪಿಯ ಒಂದು ಮನೆಗೆ ಷಂಬರ್ (ನೂರು) ಬಾಗಿಲುಗಳು ಆಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವ್ಯಂಗ್ಯವಾಗಿ ನುಡಿದರು.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಷಯದಲ್ಲಿ ಮೊದಲು ಜನರಿಗೆ ನೋಟಿಸ್ ಕೊಟ್ಟಿದ್ದವರೇ ಬಿಜೆಪಿಯವರು. ಈಗ ಆರೋಪ ಮಾಡುತ್ತಿರುವವರು ಅವರೇ, ಕಾಂಗ್ರೆಸ್‌ನವರು ನೋಟಿಸ್ ಕೊಟ್ಟಿದ್ದಾರೆ ಎಂದು ತೀರ್ಪು ಕೊಡುತ್ತಿರುವವರು ಅವರೇ. ಈಗ ಪಶ್ಚತ್ತಾಪಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಅವರ ಪಕ್ಷದ ಮನೆಗೆ ನೂರು ಬಾಗಿಲುಗಳು ಆಗಿವೆ. ಹೀಗಾಗಿಯೇ ಆ ಪಕ್ಷದ ಮುಖಂಡರು ಬೇರೆ ಬೇರೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ₹2,500 ಕೋಟಿ ಕೊಡಬೇಕು. ಮಂತ್ರಿಯಾಗಲು ₹500 ಕೊಡಬೇಕಾಗುತ್ತದೆ ಎಂದು ಹೇಳಿದ್ದು ಶಾಸಕ ಬಸನಗೌಡ ಪಾಟೀಲ ಯತ್ನಾಳ. ಅವರ ಮಾತು ಸತ್ಯ ಇರಬೇಕು. ಇಲ್ಲವಾದರೆ ಯತ್ನಾಳ ಅವರಿಗೆ ನೋಟಿಸ್ ಕೊಡಬೇಕಿತ್ತು? ಯತ್ನಾಳ ಅವರಿಗೆ ಅವರ ಪಕ್ಷದ ವರಿಷ್ಠರು ಬೆಂಬಲ ಕೊಟ್ಟಿದ್ದಾರೆ. ಯತ್ನಾಳ ಹೇಳಿದೆಲ್ಲ ನೂರಕ್ಕೆ ನೂರು ಸತ್ಯ ಎಂದರು.
ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಶಾಸಕರಿಗೆ ₹100 ಕೋಟಿ ಆಮಿಷ ಒಡ್ಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ. ಏನೂ ಹೇಸಲು ಹಿಂಜರಿಯುವುದಿಲ್ಲ. ಹಿಂದೆ ರಾಜ್ಯದಲ್ಲಿ 17 ಜನ ಶಾಸಕರನ್ನು ಖರೀದಿಸಿರುವುದೇ ದೊಡ್ಡ ಸಾಕ್ಷಿ. ಇದಕ್ಕಿಂತ ದೊಡ್ಡ ಪುರಾವೆ ಬೇಕಾ? ಎಂದು ಪ್ರಶ್ನಿಸಿದರು.
ರಾಜ್ಯದ ಮೂರು ಕಡೆಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅದೇ ರೀತಿ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ ಆಘಾಡಿ 160ರಿಂದ180 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಡವರ ಬಿಪಿಎಲ್ ಕಾರ್ಡ್ ರದ್ದಾಗಲ್ಲ’
‘ಬಡತನ ರೇಖೆಗಿಂತ ಕೆಳಗಿರುವ ಬಡವರ ಬಿಪಿಎಲ್ ಕಾರ್ಡುಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ. ಬಡವರ್‍ಯಾರಿಗೂ ವಂಚನೆಯಾಗಲ್ಲ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಸರ್ಕಾರಿ ನೌಕರರು, ಸಾಹುಕಾರರು, ತೆರಿಗೆ ಪಾವತಿಸುತ್ತಿರುವವರೆಲ್ಲರೂ ಬಿಪಿಎಲ್ ಕಾರ್ಡ್ ಹೊಂದಿರುವುದರ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅಂಥವರ ಕಾರ್ಡ್‌ಗಳು ರದ್ದಾಗಲಿವೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೇ 90ರಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇದೇಗೆ ಸಾಧ್ಯ? ಸರ್ಕಾರ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹಮ್ಮದ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕರಿಯಾ’ ಎಂದು ಕರೆದು ಅವಮಾನಿಸಿರುವ ವಿಷಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಈ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.